ಹಾಸನ: ಇವತ್ತು ನಾನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಆದ್ರೆ ಬಡವರ ಕಷ್ಟವನ್ನು ನನ್ನ ಕೈಯಲ್ಲಿ ನೋಡೋದಿಕ್ಕಾಗುತ್ತಿಲ್ಲ. ನಾನು ಇರೋತನಕ ನನ್ನ ಜನಗಳ ಸೇವೆ ಮಾಡ್ತೀನಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಕೋವಿಡ್ ನಿಂದ ಜಿಲ್ಲೆಯಲ್ಲಿ ಸಾವಿಗೀಡಾಗುತ್ತಿರೋ ಜನರ ಕುಟುಂಬಗಳನ್ನು ನೆನೆದು ಕೆಲ ಕ್ಷಣ ಭಾವುಕರಾದ್ರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾತನಾಡಿದ ಅವರು, ಕೋವಿಡ್ ನಿಂದ ಜಿಲ್ಲೆಯಲ್ಲಿ ತಮ್ಮವರನ್ನು ಕಳೆದುಕೊಂಡು ಜನ ಅನುಭವಿಸುತ್ತಿರೋ ನೋವನ್ನು ಕಣ್ಣಿನಿಂದ ನೋಡುವುದಕ್ಕೆ ಆಗುತ್ತಿಲ್ಲ. ಬೆಳಗ್ಗೆ ಮಾತನಾಡಿಸಿದವರು ಸಂಜೆ ಇರೋದಿಲ್ಲ. ಅಂತಹ ಪರಿಸ್ಥಿತಿ ಹಾಸನಕ್ಕೆ ಬಂದಿದೆ. ನನ್ನಪ್ಪನು ನನಗೆ ಜಾಸ್ತಿ ಓಡಾಡಬೇಡ. ಆರೋಗ್ಯ ನೋಡಿಕೋ ಎಂದು ಹೇಳ್ತಾರೆ. ನನಗೆ ನನ್ನ ಜನ ಮುಖ್ಯ ಎಂದರು.
ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ಹಾಸನದಲ್ಲಿ 134ಕ್ಕೂ ಹೆಚ್ಚು ಶಾಲಾ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಮತ್ತು ಕಾಲೇಜುಗಳು ನಿರ್ಮಾಣವಾಗಿವೆ. ಅಲ್ಲದೇ 2 ಸರ್ಕಾರಿ ನರ್ಸಿಂಗ್ ಕಾಲೇಜುಗಳು ಹಾಸನದಲ್ಲಿವೆ ಎಂದ್ರೆ ಅದು ದೇವೇಗೌಡ್ರು ಮತ್ತು ಕುಮಾರಸ್ವಾಮಿ ಕಾಲದಲ್ಲಿ ಮಾಡಿದ್ದು. ಈ ಎರಡು ರಾಷ್ಟ್ರೀಯ ಪಕ್ಷಗಳು ಹಾಸನಕ್ಕೆ ನೀಡಿದ ಕೊಡುಗೆಯಾದ್ರು ಏನು..? ಎಂದು ಪ್ರಶ್ನಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಬಡವರಿಗೆ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ಜಿಲ್ಲಾಧಿಕಾರಿಗಳೇ ಜಿಲ್ಲೆಗೆ ಪೂರೈಕೆಯಾಗುವ ಆಮ್ಲಜನಕ ಪೂರೈಸಲು ಮೊದಲು ಸರ್ಕಾರಿ ಆಸ್ಪತ್ರೆಗೆ ಪ್ರಾಶಸ್ತ್ಯ ನೀಡಿ. ಇಂದು ಖಾಸಗಿ ಆ್ಯಂಬುಲೆನ್ಸ್ ನ್ನು ಬಾಡಿಗೆ ಆಧಾರದ ಮೇಲೆ ಪಡೆದು ಅವರಿಗ ಪ್ರತಿ ತಿಂಗಳು 75 ಸಾವಿರ ಕೊಡ್ತಿದ್ದೀರಲ್ಲಾ..? ಏನ್ ಹೆಣಗಳನ್ನು ಸ್ಮಶಾನಕ್ಕೆ ಕಳುಹಿಸೋಕಾ ಅವುಗಳನ್ನು ತಗೋಂಡಿರೋದು ಎಂದು ಖಾರವಾಗಿ ಮಾತನಾಡಿದ್ರು.