ಹಾಸನ: ಸರ್ಕಾರ ಈಗಾಗಲೇ ಮೂರನೇ ಕೊರೊನಾ ಅಲೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದು, ಜಿಲ್ಲಾಸ್ಪತ್ರೆಗಳಿಂದ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದ ತನಕ ಸಂಪೂರ್ಣವಾಗಿ ಬೇಕಾಗುವಷ್ಚು ಆಮ್ಲಜನಕ ಹಾಸಿಗೆಗಳನ್ನು ನಿರ್ಮಾಣ ಮಾಡಲು ಸಿದ್ದತೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎಸ್. ಅಶ್ವತ್ಥ ನಾರಾಯಣ್ ಹೇಳಿದರು.
ಹಾಸನದಲ್ಲಿ ಕೋವಿಡ್ -19ರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ತಿಂಗಳಲ್ಲಿ ಎಲ್ಲ ಅವಶ್ಯಕತೆಗಳನ್ನು ಪೂರೈಸುತ್ತೇವೆ. ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳಿಗೆ ಬರುತ್ತದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ತಜ್ಞರ ಸಲಹೆಗಳನ್ನು ಪಡೆದಿದ್ದು, ಚಿಕಿತ್ಸೆಗೆ ಬೇಕಾಗುವ ವೆಂಟಿಲೇಟರ್, ಚುಚ್ಚುಮದ್ದು, ಆಮ್ಲಜನಕ ಸೇರಿ ಎಲ್ಲವನ್ನು ತಯಾರಿ ಮಾಡಿಕೊಳ್ಳುತ್ತಿದ್ದು, ಈ ವರ್ಷದ ಒಳಗೆ 18 ವರ್ಷ ಮೇಲ್ಪಟ್ಟವರಿಗೆ ಒಂದು ಡೋಸ್ ನೀಡಲು ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.
ಹಾಸನ ಸೇರಿ ರಾಜ್ಯದಲ್ಲಿ ವೈದ್ಯರ ಕೊರತೆ ಇದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಸೇರಿ 2,000ಕ್ಕೂ ಹೆಚ್ಚು ವೈದ್ಯರನ್ನು ನೇಮಕಾತಿ ಮಾಡಿಕೊಂಡು ಅವರ ಕಾರ್ಯಸ್ಥಳಕ್ಕೆ ನಿಯೋಜಿಸಲಾಗುವುದು ಎಂದರು.
ಇನ್ನು ವಿಪತ್ತು ನಿರ್ವಹಣಾ ನಿಧಿಯಿಂದ ಹಾಸನ ಜಿಲ್ಲೆಗೆ ಈಗಾಗಲೇ 3 ಕೋಟಿ ರೂ. ಬಂದಿದ್ದು ಇನ್ನುಳಿದ 10 ಕೋಟಿ ರೂ. ಮೇ 24ರಂದು ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದ ಅವರು, ತಕ್ಷಣವೇ ಹಾಸನದ ಹಿಮ್ಸ್ ಆಸ್ಪತ್ರೆಗೆ ಹೆಚ್ಚುವರಿಯಾಗಿ 50 ವೆಂಟಿಲೇಟರ್ ನೀಡುವ ವ್ಯವಸ್ಥೆಯನ್ನು ಕೂಡ ಮಾಡುತ್ತೇವೆ ಎಂದರು.
ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ
ಇತರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ರೀತಿಯಲ್ಲಿ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹಾಸನ ಶಾಸಕ ಪ್ರೀತಮ್ ಗೌಡ ಕೋವಿಡ್ -19ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನವಿ ಮಾಡಿದರು.
ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಕನಿಷ್ಠ ಮೂರರಿಂದ ಐದು ಲಕ್ಷ ರೂ. ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಅಲ್ಲದೇ ಜಿಲ್ಲೆಯಲ್ಲಿ ವೆಂಟಿಲೇಟರ್ ಮತ್ತು ಆಮ್ಲಜನಕದ ಕೊರತೆ ಇದ್ದು, ದಯಮಾಡಿ ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕು. ಇನ್ನು ಪ್ರವಾಸಿ ಕ್ಷೇತ್ರಗಳಲ್ಲಿ ಇರುವಂತಹ ಗೈಡ್ಗಳಿಗೆ ಸುಧಾಮೂರ್ತಿ ನೀಡುತ್ತಿರುವ ಸೌಲಭ್ಯಗಳ ರೀತಿಯಲ್ಲಿ ಸರ್ಕಾರವು ಕೈಜೋಡಿಸಿ ಅವರುಗಳಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಬೇಲೂರು ಶಾಸಕ ಲಿಂಗೇಶ, ಪ್ರೀತಮ್ ಗೌಡ ಸಚಿವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಇದನ್ನ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪತ್ರಿಕೆಗಳಿಗೆ ಮತ್ತು ದೃಶ್ಯ ಮಾಧ್ಯಮದವರಿಗೆ, ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡುತ್ತೇನೆ, ಸಂಪುಟದಲ್ಲಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ಆಕ್ಸಿಜನ್ ಕೊರತೆ
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿದ್ದು, ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಬೇಕು. ಗ್ರಾಮೀಣ ಭಾಗದಲ್ಲಿನ ಸೋಂಕಿತರನ್ನು ಸಿಸಿಸಿಗೆ ಕರೆ ತರಲು ತುಂಬಾ ಕಷ್ಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಆರೋಗ್ಯ ಇಲಾಖೆಯಿಂದ ಔಷಧ ಮತ್ತು ಮಾತ್ರೆಗಳನ್ನು ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಿದರೆ ಸೋಂಕಿತರನ್ನು ಕಡಿಮೆ ಮಾಡಬಹುದು. ಹಾಗಾಗಿ ಈಗಾಗಲೇ 40 ಲಕ್ಷ ರೂ. ಔಷಧಗಳಿಗಾಗಿ ಖರ್ಚು ಮಾಡಿದ್ದೇವೆ ಎಂದರು.
ಜಿಲ್ಲೆಯಲ್ಲಿ ಔಷಧಗಳ ಕೊರತೆಯ ಜೊತೆಗೆ ವೈದ್ಯರ ಕೊರತೆಯಿದೆ. ತಾತ್ಕಾಲಿಕವಾಗಿ ನೇಮಕ ಪ್ರಕ್ರಿಯೆ ಬೇಡ ಎಂದಿದ್ದರು. ನಾವು ಈಗಾಗಲೇ 21 ವೈದ್ಯರ ನೇಮಕಕ್ಕೆ ಪ್ರಕ್ರಿಯೆ ನಡೆಸಿದ್ದೇವೆ. ಈಗ ಅರ್ಜಿ ಹಾಕಿರುವ ಅವರನ್ನು ಪರೀಕ್ಷೆ ನಡೆಸಿ ನಂತರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿಳಿಸಿದರು.