ಹಾಸನ: ಒಪ್ಪತ್ತಿನ ಊಟ ಇಲ್ಲದಿದ್ದರೂ ಮಾನವ ಬದುಕಿ ತೋರಿಸಬಲ್ಲ. ಆದರೆ ತುಂಡು ಬಟ್ಟೆ ಇಲ್ಲದೆ ಸಮಾಜದ ಮುಂದೆ ಬರಲಾರ. ದುಡಿಯುವ ರಟ್ಟೆಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ ಎಂಬ ಗಾದೆ ಮಾತಿನಂತೆ ಇಡೀ ದೇಶದ ಜನರ ಮಾನ ಮುಚ್ಚುವಂತ ನೇಕಾರರ ಬದುಕು ಈಗ ಮೂರಾಬಟ್ಟೆಯಾಗಿದೆ.
ಕೋವಿಡ್-19 ಎಂಬ ಮಹಾಮಾರಿ ಕೈಮಗ್ಗಗಳ ಸಪ್ಪಳಗಳನ್ನೇ ನಿಲ್ಲಿಸಿಬಿಟ್ಟಿದೆ. ಕೈಮಗ್ಗ ಯಂತ್ರಗಳು ಈಗ ಧೂಳು ಹಿಡಿಯುವುದಷ್ಟೆ ಅಲ್ಲದೆ ತುಕ್ಕು ಹಿಡಿದಿವೆ. ಬಹುಪಾಲು ಮನೆಯಲ್ಲಿಯೇ ಕೆಲಸ ಮಾಡುತ್ತಾ ಸಂಸಾರವೆಂಬ ನೊಗವನ್ನು ಎಳೆಯುತ್ತಿದ್ದ ಕುಟುಂಬಗಳು, ಪ್ರತಿನಿತ್ಯ 2ರಿಂದ 3 ಸಾವಿರ ರೂ. ಸಂಪಾದನೆ ಮಾಡುತ್ತಿದ್ದರು. ಆದರೆ ಅಂತಹ ಸಂಪಾದನೆಗೆ ಬ್ರೇಕ್ ಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಕ್ಕಹಲ್ಕೂರು ಗ್ರಾಮದ ಸುಮಾರು 120 ಕುಟುಂಬಗಳು ಕೈಮಗ್ಗ ನಂಬಿಕೊಂಡು ಜೀವನ ಸಾಗಿಸುತ್ತಿದ್ದವು. ಬೆಂಗಳೂರಿನ ಚಿಕ್ಕಪೇಟೆಯ ಬಹುತೇಕ ಅಂಗಡಿ ಮಾಲೀಕರು ಇಲ್ಲಿಂದಲೇ ಸೀರೆಗಳನ್ನು ಖರೀದಿ ಮಾಡುತ್ತಿದ್ದರು. ಈಗ ಅವರುಗಳ ಸುಳಿವೇ ಇಲ್ಲ. ಕೋವಿಡ್-19 ಬರುವ ಮುನ್ನ ನೇಯ್ದ ಸೀರೆಗಳು ಈ ಗ್ರಾಮದ ಕುಟುಂಬಗಳ ಮನೆಯಲ್ಲಿಯೇ ಉಳಿದಿವೆ. ಹೀಗಾಗಿ ಮಕ್ಕಳಿಗೆ ಕನಿಷ್ಠ ಬಿಸ್ಕತ್ ಕೊಡಿಸುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಈಗಾಗಲೇ ನೇಕಾರರಿಗೂ ಕೂಡ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಈ ಗ್ರಾಮದ ಬಹುತೇಕ ಕುಟುಂಬಗಳಿಗೆ ಹಣ ಬಂದಿಲ್ಲ. ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ನೂಲು ಖರೀದಿಸಿ, ಇವರು ಬಟ್ಟೆ ತಯಾರಿಸಿ ನಿಗಮಕ್ಕೆ ನೀಡುತ್ತಿದ್ದರು. ಆದರೆ ಈಗ ಕೂಲಿ ಕೂಡ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿ ಬಂದಿದೆ. ನುಣುಪಾದ ರೇಷ್ಮೆ ಸೀರೆಗಳನ್ನು ಹಿಡಿದ ಕೈಗಳು, ಇವತ್ತು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಾ ಮಾಡಿದ ಸಾಲವನ್ನು ತೀರಿಸಲು ಶ್ರಮ ಪಡುತ್ತಿವೆ.
6 ತಿಂಗಳಿನಿಂದ ಕೈಯಲ್ಲಿ ಕೆಲಸವಿಲ್ಲದೆ, ತಯಾರಿಸಿರುವ ಸೀರೆಗಳು ಮಾರಾಟವಾಗದೆ ಸಾಲ ಕೊಟ್ಟ ಬ್ಯಾಂಕುಗಳ ಪ್ರತಿನಿಧಿಗಳು ಮನೆಯ ಮುಂದೆ ಬಂದು ಸಾಲ ಮರು ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ವಿಧಿ ಇಲ್ಲದೆ ನಮ್ಮ ಮಕ್ಕಳು ಕಲ್ಲಿನ ಕೆಲಸಕ್ಕೆ ಹೋಗುತ್ತಿದ್ದಾರೆ. ಮನೆಯಲ್ಲಿ ಉಪ್ಪು, ಜೀರಿಗೆ, ಮೆಣಸಿಗೂ ಕೂಡ ತುಂಬಾ ಕಷ್ಟವಾಗಿದೆ. ಸಾಲ ಕೊಟ್ಟವರು ಮಾತ್ರ ಸಾಲ ಮರು ಪಾವತಿ ಮಾಡಬೇಕೆಂದು ಪಟ್ಟು ಹಿಡಿಯುತ್ತಿದ್ದು, ವಿಧಿಯಿಲ್ಲದೇ ಬೇರೆ ಬೇರೆ ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 20 ವರ್ಷಗಳ ಹಿಂದೆ ಸುಮಾರು 45 ಸಾವಿರಕ್ಕೂ ಅಧಿಕ ಕೈಮಗ್ಗ ಘಟಕಗಳು ರಾಜ್ಯದಲ್ಲಿದ್ದು, ವಿವಿಧ ಕಾರಣಗಳಿಂದ ಈಗಾಗಲೇ ಕೈಮಗ್ಗ ಘಟಕಗಳು ಮುಚ್ಚುತ್ತಿವೆ. ಸದ್ಯ ಹತ್ತು ಸಾವಿರ ಘಟಕಗಳು ರಾಜ್ಯದಲ್ಲಿ ಕಾರ್ಯರಂಭ ಮಾಡುತ್ತಿರಬಹುದು ಅಷ್ಟೇ.
ಸರ್ಕಾರದ ಪ್ಯಾಕೇಜ್ ಕೂಡ ತಲುಪಿಲ್ಲ:
ರೈತ ಮತ್ತು ನೇಕರ ಸರ್ಕಾರದ ಎರಡು ಕಣ್ಣುಗಳಿದ್ದಂತೆ. ಕೇಂದ್ರ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ಯಾಕೇಜ್ ಘೋಷಣೆ ಮಾಡಿದೆ. ಅದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಇದೇ ಯೋಜನೆಗೆ ಹೆಚ್ಚುವರಿಯಾಗಿ 4 ಸಾವಿರ ನೀಡುವ ಮೂಲಕ 10 ಸಾವಿರ ನೆರವು ನೀಡುತ್ತಿದೆ. ಕೋವಿಡ್-19 ಎಂಬ ವಿಷಮ ಸ್ಥಿತಿಯಲ್ಲಿ ಸಿಲುಕಿರುವ ನೇಕಾರರಿಗೆ ರಾಜ್ಯ ಸರ್ಕಾರ ಕೇವಲ 2 ಸಾವಿರ ರೂ. ಪ್ಯಾಕೇಜ್ ಘೋಷಣೆ ಮಾಡಿರುವುದು ಎಷ್ಟು ಸರಿ ಎನ್ನುವುದು ನೇಕಾರರ ಪ್ರಶ್ನೆ.
ಚಿಕ್ಕಹಲ್ಕೂರು ಗ್ರಾಮ ಸೀರೆ ತಯಾರಿಕೆಗೆ ಹೆಸರುವಾಸಿ. ಗೌರವಯುತ ನೇಯ್ಗೆ ಮೂಲಕ ಜನರ ಮಾನ ಮುಚ್ಚುವ ಸಮುದಾಯ ಈಗ ತೊಂದರೆಗೆ ಸಿಲುಕಿದೆ. ಶೇಕಡಾ ಹತ್ತರಷ್ಟು ಶ್ರೀಮಂತ ನೇಕಾರರು ಇದ್ದರೂ ಶೇ. 90ರಷ್ಟು ನೇಕಾರರ ಬದುಕು ಅವತ್ತಿನ ಕೂಲಿಯ ಮೇಲೆಯೇ ನಿಂತಿದೆ. ಇನ್ನಾದರೂ ಸರ್ಕಾರ ನೇಕಾರರ ಬದುಕನ್ನು ಹಸನುಗೊಳಿಸುವ ಕೆಲಸ ಮಾಡಬೇಕಿದೆ.