ಹಾಸನ /ಹೊಳೆನರಸೀಪುರ: ಪ್ರತಿಯೊಬ್ಬ ಸೋಂಕಿತರನ್ನು ಹಾಗೂ ಅವರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಮುಲಾಜಿಲ್ಲದೇ ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಬೇಕು ಎಂದು ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಹಾಸನ ಜಿಲ್ಲೆ ಹೊಳೆನರಸೀಪುರದ ಪುರಸಭೆ ಆವರಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದ್ರು. ಜಿಲ್ಲೆಯಲ್ಲಿ ಪ್ರತಿನಿತ್ಯ ಕೊರೊನಾ ಕೇಸ್ ಸಾವಿರದ ಗಡಿ ದಾಟುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ತಾಲೂಕು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ತಾಲೂಕಿಗೆ ಪ್ರತಿನಿತ್ಯ 50 ಆಕ್ಸಿಜನ್ ಸಿಲಿಂಡರ್ ಬೇಕು. ಇಂಥ ಸಂದರ್ಭದಲ್ಲಿ ಆಯುಷ್ ಇಲಾಖೆಯನ್ನು ಬಳಸಿಕೊಂಡರೆ ಉತ್ತಮ. ಇದ್ರ ಜೊತೆಗೆ ಜಿಲ್ಲಾಡಳಿತ ಆ್ಯಕ್ಟಿವ್ ಆಗಿ ಪ್ರತಿ ಗ್ರಾಮದಲ್ಲಿರುವ ಸೋಂಕಿತರನ್ನು ಪತ್ತೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ 2500 ಮಂದಿ ವೈದ್ಯರ ಕೊರತೆ ಇದ್ದು, ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗ ತಕ್ಷಣ ವೈದ್ಯರ ನೇಮಕಾತಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇದುವರೆಗೂ ಏನೂ ಮಾಡಿಲ್ಲ. ರಾಜ್ಯದಲ್ಲಿ ಆರೋಗ್ಯಮಂತ್ರಿಗಳು ಉತ್ತರ ಕರ್ನಾಟಕದ ಮಂದಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಆದರೆ ಹಾಸನವನ್ನು ಕೂಡ ಈ ಬಾರಿ ಸೇರಿಸಿಕೊಂಡು ನೇಮಕಾತಿ ಪ್ರಕ್ರಿಯೆ ಮಾಡಬೇಕು. ಈ ವಿಚಾರವನ್ನು ಮತ್ತೊಮ್ಮೆ ಅವರ ಗಮನಕ್ಕೆ ತರಬೇಕು ಎಂದು ರೇವಣ್ಣ ಸಚಿವರ ಗಮನ ಸೆಳೆದರು.
ಇನ್ನು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ರೇವಣ್ಣ, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ಪ್ರತಿಯೊಬ್ಬರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಬೇಕು. ಮನೆಯಲ್ಲಿ ವ್ಯವಸ್ಥೆಗಳಿದ್ದರೆ ಅವರನ್ನು ಹೋಂ ಐಸೋಲೇಶನ್ ಮಾಡಿಸಿ ಎಂದರು.
ಪ್ರತಿ ವಾರಕ್ಕೊಮ್ಮೆ ವಿಡಿಯೋ ಕಾನ್ಫರೆನ್ಸ್ ಮಾಡಿ ಜಿಲ್ಲಾಧಿಕಾರಿಗಳು ತಾಲೂಕು ಆಡಳಿತಕ್ಕೆ ಸೂಚನೆ ನೀಡಬೇಕು. ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆ. ಕುಮಾರಸ್ವಾಮಿ ಸರ್ಕಾರದಲ್ಲಿ 15 ಕೋಟಿ ನೀಡಿದ್ರು. ಅದನ್ನು ನಿಮ್ಮ ಸರ್ಕಾರ ವಾಪಸ್ ಪಡೆದಿದೆ. ಈಗ ರಾಜಕೀಯ ಬೇಡ. ಸ್ವಲ್ಪವಾದ್ರು ಹಣ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ರು. ತರಕಾರಿ, ಹೂ ಮತ್ತು ಗೊಬ್ಬರದ ವ್ಯಾಪಾರಕ್ಕೆ ಬೆಳಗಿನ ವೇಳೆ ಒಂದೆರಡು ಗಂಟೆಗಳ ಕಾಲ ಹೆಚ್ಚು ಸಮಯ ನೀಡಬೇಕು ಎಂದ್ರು.
ಇನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕರೆ ಮಾಡಿ, ನನ್ನ ಐದು ತಿಂಗಳ ಸಂಬಳ ನೀಡುತ್ತೇನೆ, ಅದರಲ್ಲಿ ಜಿಲ್ಲೆಗೆ ಆಕ್ಸಿಜನ್ ಖರೀದಿಸಿ ಜನಗಳಿಗೆ ಉಪಯೋಗ ಮಾಡುವಂತೆ ಹೇಳಿದ್ದಾರೆ ಎಂದು ರೇವಣ್ಣ ತಿಳಿಸುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಸಚಿವ ಗೋಪಾಲಯ್ಯ, ಹೌದು ನನಗೆ ಕರೆ ಮಾಡಿದ್ದರು ಎಂದು ವಿಚಾರ ತಿಳಿಸಿದರು. ಆದರೆ ನಿಮ್ಮ 5 ತಿಂಗಳ ಸಂಬಳ ಸದ್ಯದ ಪರಿಸ್ಥಿತಿಯಲ್ಲಿ ಬೇಡ. ಸರ್ಕಾರವೇ ಎಲ್ಲ ವ್ಯವಸ್ಥೆ ಮಾಡುತ್ತದೆ. ಆದರೆ ನಿಮ್ಮ ಈ ಕಾಳಜಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದೇನೆ ಎಂದು ಸಭೆಯಲ್ಲಿಯೇ ಗೋಪಾಲಯ್ಯ ದೇವೇಗೌಡರಿಗೆ ಅಭಿನಂದನೆ ಸಲ್ಲಿಸಿದರು.