ಹಾಸನ : ಅಡುಗೆಮನೆಯಿಂದ ಅಂತರಿಕ್ಷದವರೆಗೂ, ಕೃಷಿಯಿಂದ ವೈದ್ಯವೃತ್ತಿಯವರೆಗೂ, ಪ್ರತಿ ಕ್ಷೇತ್ರದಲ್ಲಿಯೂ ಇಂದು ಮಹಿಳೆಯರು ವಿಶಿಷ್ಟ ಛಾಪು ಮೂಡಿಸುತ್ತಿದ್ದಾರೆ. ದೇಶ ಸೇವೆಯಲ್ಲಿಯೂ ಸಹ ಪುರುಷರಂತೆ ತಾವು ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸದ್ಯ ಎಂಬಿ ಪ್ರೀತಿ ವಿಶ್ವಸಂಸ್ಥೆಯ ಶಾಂತಿ ಸೇನಾ ತುಕಡಿಗೆ ಆಯ್ಕೆಯಾಗುವ ಮೂಲಕ ಹಾಸನ ಜಿಲ್ಲೆಯಿಂದ ಭಾರತೀಯ ಸೇನೆಗೆ ಆಯ್ಕೆಯಾದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಹೆಣ್ಣುಮಕ್ಕಳು ಕೀರ್ತಿಪತಾಕೆಯನ್ನು ಹಾರಿಸಿ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅಂತಹ ಮಹಿಳೆಯರಲ್ಲಿ ಕನ್ನಡತಿ ಕೂಡ ಒಬ್ಬರು. ಪ್ರೀತಿ ವಿಶ್ವಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ನಡೆಸುವ ಆಯ್ಕೆ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯದಿಂದ ಆಯ್ಕೆಯಾಗಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಾದಾಪುರ ಗ್ರಾಮದವರಾದ ಬಸಪ್ಪ ಮತ್ತು ಜಯಮ್ಮ ದಂಪತಿಯ ಮಗಳೇ ಎಂ ಬಿ ಪ್ರೀತಿ. ಪ್ರಾಥಮಿಕ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿಯೂ ಹೆಚ್ಚಿನ ಆಸಕ್ತಿ ಇದ್ದ ಇವರಿಗೆ ತಂದೆ- ತಾಯಿಯೂ ಪ್ರೋತ್ಸಾಹ ನೀಡಿದರು.
ಮದುವೆ ನಂತರವೂ ವಿದ್ಯಾಭ್ಯಾಸ : ಬಿ ಎ ಪದವಿ ಮಾಡುವಾಗಲೇ ಮದುವೆ ಪ್ರಸ್ತಾಪ ಬಂದಾಗ ವಿದ್ಯಾಭ್ಯಾಸ ಪೂರ್ಣಗೊಳಿಸಿ ನೌಕರಿಗೆ ಸೇರುವ ಆಸೆಯನ್ನು ತೆರೆದಿಟ್ಟರು. ಅದರಂತೆ, ಎರಡು ಮನೆಯವರು ಇದಕ್ಕೆ ಒಪ್ಪಿಕೊಂಡಾಗ 2014ರ ಮಾರ್ಚ್ 27ರಂದು ಷಣ್ಮುಖ ಅವರೊಂದಿಗೆ ಸಪ್ತಪದಿಯನ್ನು ತುಳಿದರು.
ಮದುವೆ ನಂತರ ಬಿ.ಇಡಿ ಶಿಕ್ಷಣ ಪಡೆಯುವಾಗ ಆರು ತಿಂಗಳಲ್ಲಿ ಸೈನ್ಯದಲ್ಲಿ ಸೇವೆ ಮಾಡಲು ಅರ್ಜಿ ಸಲ್ಲಿಸಿದ್ರು. ಮತ್ತು ಅದರಲ್ಲಿ ಆಯ್ಕೆಯಾಗಿ ಕುಟುಂಬದವರ ಒಪ್ಪಿಗೆ ಪಡೆದು ಭಾರತೀಯ ಸೇನೆಯ ಅಸ್ಸೋಂ ರೈಫಲ್ ಬೆಟಾಲಿಯನ್-9ಕ್ಕೆ ಸೇರ್ಪಡೆಗೊಂಡರು. 2000 ನಂತರ ವಿಶ್ವ ಸಂಸ್ಥೆಯ ಶಾಂತಿ ಸೇನಾ ತುಕಡಿಯ ಪರೀಕ್ಷೆಗೆ ಹಾಜರಾಗಿ 2020ರಲ್ಲಿ ಆಯ್ಕೆಯಾಗಿ ತರಬೇತಿಗಾಗಿ ದೆಹಲಿಗೆ ತೆರಳಿದರು. ಇದು ಮನೆಯಲ್ಲಿ ಸಂಭ್ರಮದ ವಾತಾವರಣವನ್ನೆ ಉಂಟು ಮಾಡಿತು.
ಪತ್ನಿಯ ಬೆನ್ನೆಲುಬಾಗಿ ಪತಿ : ಪ್ರೀತಿ ಅವರ ಪತಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಬೆಟ್ಟದಸಾತೇನಹಳ್ಳಿಯವರು. ತಮ್ಮ ವಿದ್ಯಾಭ್ಯಾಸದ ಬಳಿಕ ಕೆಲ ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿ, ಒಂದಿಷ್ಟು ಹಣ ಸಂಪಾದಿಸಿದ್ದರು. ಸದ್ಯ ಸ್ವಗ್ರಾಮದಲ್ಲಿಯೇ ಉತ್ತಮ ಕೃಷಿಕರಾಗಿದ್ದಾರೆ.
ಪತ್ನಿ ಸೇನೆಗೆ ಸೇರಲು ಬಯಸಿದಾಗ ಏನೋ ಒಂದು ರೀತಿಯ ಆತಂಕ ಮನೆ ಮಾಡಿತ್ತು. ಅಕ್ಕಪಕ್ಕದವರು ಆಡುತ್ತಿದ್ದ ಕುಹಕದ ನುಡಿಯನ್ನು ಕೇಳಿಸಿಕೊಂಡು ಬಳಿಕ ಅವುಗಳನ್ನೆಲ್ಲವನ್ನು ಬದಿಗೊತ್ತಿ, ತನ್ನ ಅರ್ಧಾಂಗಿಯ ಮನದಾಸೆಯನ್ನು ಈಡೇರಿಸಿಸಲು ಒಪ್ಪಿಗೆ ಸೂಚಿಸಿದರು. ಇದಕ್ಕೆ ಮನೆಯವರೆಲ್ಲರೂ ಸಮ್ಮತಿ ಸೂಚಿಸಿದ್ದರು.
ಬಳಿಕ ವಿಶ್ವ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪ್ರೀತಿ ಸಂತೋಷದಿಂದಲೇ ಸ್ವೀಕರಿಸಿ ದೇಶಸೇವೆಗೆ ತೆರಳಿದ್ದಾರೆ. ಅವರಿಗೆ ಸದ್ಯ ಜೀವನ (3) ಮತ್ತು ಸಿಂಚನ(2) ಎಂಬ ಇಬ್ಬರು ಮಕ್ಕಳಿದ್ದಾರೆ. ಪತ್ನಿಯ ದೇಶಪ್ರೇಮದ ಜೊತೆಗೆ ಮಕ್ಕಳ ತೊದಲು ನುಡಿಗಳ ನಡುವೆ ಸಮಯಸಿಕ್ಕಾಗ ಮಡದಿಯೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ ಪತಿ ಷಣ್ಮುಖ.
ಗಳ ಗಳನೆ ಅತ್ತ ಕಂದಮ್ಮಗಳು : ವಿಶ್ವಶಾಂತಿ ಪಡೆಯ ಸೈನ್ಯಕ್ಕೆ ಸೇರಲು ಹೊರಟಾಗ, ಇಬ್ಬರು ಮಕ್ಕಳು ಅಮ್ಮನನ್ನು ಬಿಡದೇ ಅಳುತ್ತಿದ್ದ ದೃಶ್ಯ ಕಂಡು ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಮಕ್ಕಳಿಗೆ ಸಾಂತ್ವನ ಹೇಳಲು ಸಾಧ್ಯವಾಗದೇ, ಮೌನವಾಗಿ ಬಿಟ್ಟಿದ್ದಾರೆ. ಮಕ್ಕಳಿಗೆ ಅಮ್ಮನ ನೆನಪಾದಾಗ, ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಆಟವಾಡಿಸಿಕೊಂಡು ಬರುತ್ತೇನೆ ಎಂದು ಷಣ್ಮುಖ ಅವರು ಹೇಳುತ್ತಾರೆ.
ದೇಶ ಸೇವೆಯೇ ಮುಖ್ಯ : ಇನ್ನು ಪತ್ನಿ ಸೇನೆಗೆ ಸೇರುತ್ತೇನೆ ಎಂದಾಗ ಸ್ವಲ್ಪ ಆತಂಕವಾಯಿತು. ಪುಟ್ಟ ಮಕ್ಕಳು ಬೇರೆ ಅಮ್ಮನನ್ನು ಬಿಟ್ಟು ಹೇಗಿರುತ್ತವೆ ಎಂದು ಯೋಚಿಸಿದ್ದೆ. ದೇಶಪ್ರೇಮಕ್ಕೆ ಸೋತು ಕಳುಹಿಸುವ ನಿರ್ಧಾರ ಮಾಡಿದೆ. ಇಂದು ನನ್ನ ಪತ್ನಿ ವಿಶ್ವಸಂಸ್ಥೆಯ ಅಡಿಯಲ್ಲಿ ಸೇವೆ ಮಾಡುತ್ತಿದ್ದಾರೆ ಎಂಬ ಹೆಮ್ಮೆ ನನಗೆ ಇದೆ. ಆಕೆ ಎಲ್ಲಿದ್ದರೂ ಚೆನ್ನಾಗಿರಬೇಕು ಎನ್ನುತ್ತಾರೆ ಪತಿ ಷಣ್ಮುಖ.
ಹಾಸನ ಎಂದರೇ ಕೇವಲ ಶಿಲ್ಪಕಲೆಗಳ ತವರೂರಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿಯಾದ್ರೂ ಅಂತರಿಕ್ಷವನ್ನು ಉಡಾವಣೆ ಮಾಡಿದರೂ ಅದನ್ನು ನಿಯಂತ್ರಿಸುವುದು ಹಾಸನ ಜಿಲ್ಲೆಎಂಬುದು ಎಷ್ಟೋ ಜನಕ್ಕೆ ಗೊತ್ತಿಲ್ಲ.
ಅಂತಹುದರಲ್ಲಿ ಇಂದು ಹಾಸನದಿಂದ ವಿಶ್ವ ಸಂಸ್ಥೆಯ ಶಾಂತಿ ಸೇನಾ ತುಕಡಿಗೆ ಸೇರ್ಪಡೆಯಾಗುವ ಮೂಲಕ ಹಾಸನದ ಪ್ರೀತಿ ಎಂಬ ಮಹಿಳೆ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದು, ದೇಶದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡ್ಯೊಯ್ದ ಹಾಸನ ಏಕೈಕ ವೀರವನಿತೆಯೆಂದರೇ ತಪ್ಪಾಗಲಾರದು.