ಹಾಸನ: ಜಿಲ್ಲೆಯಲ್ಲಿ ಮತ್ತೆ ಜನಜೀವನ ಇನ್ನು ಯಥಾಸ್ಥಿತಿಗೆ ಬಂದಿಲ್ಲ. ಈಗಾಗಲೇ ಸಮುದಾಯಕ್ಕೂ ಕೊರೊನಾ ಹರಡಿದ ಕಾರಣ ನಿತ್ಯ 300-400 ಪ್ರಕರಣಗಳು ದಾಖಲಾಗುತ್ತಿವೆ. ಸಾಮಾಜಿಕ ಅಂತರ ಮರೆತು ಓಡಾಡುತ್ತಿರುವುದರಿಂದಲೇ ಅಷ್ಟು ಪ್ರಕರಣಗಳು ವರದಿಯಾಗಲು ಕಾರಣ ಎನ್ನುತ್ತಾರೆ ಜನ.
ಆರ್ಥಿಕ ಪರಿಸ್ಥಿತಿ ಶೋಚನೀಯ: ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿರುವ ಕಾರಣ ಹಾಸನದ ಕೈಗಾರಿಕೋದ್ಯಮ ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಕೃಷಿ ಮತ್ತು ವಾಣಿಜ್ಯ ಬೆಳೆಗಳು ರಫ್ತಾಗದೇ ಉಳಿದಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೊತೆಗೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ 10 ವರ್ಷ ಹಿಂದೆ ಹೋಗಿದೆ ಎನ್ನಲಾಗಿದೆ.
ಚೇತರಿಸದ ಪ್ರವಾಸೋದ್ಯಮ: ಪ್ರವಾಸೋದ್ಯಮವನ್ನೇ ನಂಬಿ ಜೀವನ ಕಟ್ಟಿಕೊಂಡವರ ಬದುಕು ನಡು ಬೀದಿಗೆ ಬಿದ್ದಿದೆ. ಹೋಟೆಲ್ಗಳು, ಕಾರು ಮಾಲೀಕರು ಮತ್ತು ಚಾಲಕರು, ಆಟೋ ವಾಲಾಗಳು, ಪ್ರವಾಸೋದ್ಯಮ ಕ್ಷೇತ್ರಗಳ ಗೈಡ್ಗಳು, ಕರಕುಶಲ ಕರ್ಮಿಗಳು ಹೀಗೆ ಹತ್ತಾರು ಸಾವಿರಾರು ಜನರು ಕತ್ತಲಲ್ಲಿ ದಿನ ದೂಡುತ್ತಿದ್ದಾರೆ.
ಮೊದಲು 800-1,000 ತನಕ ಸಂಪಾದನೆ ಮಾಡುತ್ತಿದ್ದ ಆಟೋ ಮತ್ತು ವಾಹನ ಚಾಲಕರು, ಲಾಕ್ಡೌನ್ ಬಳಿಕ 300 ಸಂಪಾದನೆ ಮಾಡುವುದು ಕಷ್ಟವಾಗಿದೆ. ಸರ್ಕಾರ ಘೋಷಿಸಿದ ಪ್ಯಾಕೇಜ್ ಎಲ್ಲರ ಕೈ ಸೇರಿಲ್ಲ. ಕೋವಿಡ್ ಭಯದಿಂದ ಪ್ರಯಾಣಿಕರು ಆಟೋ ಹತ್ತಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ನಮ್ಮ ಜೀವನದ ಬಂಡಿ ಮುಂದೆ ಹೋಗುತ್ತಿಲ್ಲ. ಸಾಲ - ಸೋಲ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಳ್ಳುತ್ತಾರೆ ಆಟೋ ಚಾಲಕರು.
ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೇ ಶಾಲೆಯ ಆರಂಭಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ಜಿಲ್ಲೆಯ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ. ಜಾಗೃತಿ ವಹಿಸಿದ ಬಳಿಕ ಶಾಲೆ ಪ್ರಾರಂಭಿಸಿ ಎಂದು ಅವರು ಹೇಳಿದ್ದಾರೆ.
ಅನ್ಲಾಕ್ 5.0 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಚಿತ್ರಮಂದಿರ, ಈಜುಕೊಳ, ಶಾಲೆಗಳ ಆರಂಭಕ್ಕೆ ಸೂಚಿಸಿದೆ. ಆದರೆ, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿದರೆ ಮಾತ್ರ ಜಿಲ್ಲೆಯಲ್ಲಿ ಜನಜೀವನ ಮತ್ತಷ್ಟು ಯಥಾಸ್ಥಿತಿಗೆ ಬರಲು ಸಾಧ್ಯ. ಇಲ್ಲವಾದರೆ ಕಷ್ಟ.