ಹಾಸನ: ತುರ್ತು ಆರೊಗ್ಯ ಚಿಕಿತ್ಸೆ, ಕೆಲವೊಂದು ಕ್ಷೇತ್ರದ ನಿರ್ದಿಷ್ಟ ಸೇವೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ವಿನಾಯಿತಿ ನೀಡಿದ್ದು, ಉಳಿದಂತೆ ಮೇ. 3ರವರೆಗೆ ಲಾಕ್ಡೌನ್ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ ಚಟುವಟಿಕೆ, ಬ್ಯಾಂಕ್ ಚಟುವಟಿಕೆ, ಸರಕುಗಳ ಸಾಗಣೆ ಇವುಗಳಿಗೆ ಹಿಂದಿನಂತೆಯೇ ಯಾವುದೇ ನಿರ್ಬಂಧವಿಲ್ಲ. ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳನ್ನು ಕೂಡ ಪ್ರಾರಂಭಿಸಲಾಗುತ್ತದೆ. ಜೊತೆಗೆ ಸಾರ್ವಜನಿಕರಿಗೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಷಿಯನ್ಸ್, ಪ್ಲಂಬರ್, ಕಾರ್ಪೆಂಟರ್ ಇತರೆ ಸ್ವಉದ್ಯೋಗ ಮಾಡುವವರಿಗೆ ಪಾಸ್‌ಗಳನ್ನು ನೀಡಿ, ಸಾರ್ವಜನಿಕರು ಕರೆ ಮಾಡಿದಾಗ ಮಾತ್ರ ಹೋಗಿ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ದಿನೇ ದಿನೆ ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗೆ ಇಳಿಯುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆಯಿಂದ ಕ್ರಮ ವಹಿಸಿ ಹೆಚ್ಚಿನ ದಂಡ ವಸೂಲಿ ಮಾಡಲಾಗುತ್ತದೆ. ದ್ವಿಚಕ್ರ ವಾಹನಗಳಿಗೆ 500 ರೂಪಾಯಿ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1000 ರೂಪಾಯಿ ದಂಡ ಹಾಕಲಾಗುತ್ತದೆ. ಸಾರ್ವಜನಿಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲೆಯಲ್ಲಿ ಇಲ್ಲಿಯವರೆಗೆ ಒಂದೂ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನಿರಂತರ ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದವರನ್ನೂ ಸಹ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದರು.