ಹಾಸನ: ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಹುಡುಗರ ಗುಂಪೊಂದು ಇಂದು ತಮ್ಮ ಬಡಾವಣೆಯ ಜನರು ಮೆಚ್ಚುವಂತಹ ಕೆಲಸ ಮಾಡಿದ್ದು, ತಮ್ಮ ಕುಟುಂಬದ ಸದಸ್ಯರಿಂದಲೂ ಸಹ ಭೇಷ್ ಎನಿಸಿಕೊಂಡಿದ್ದಾರೆ.
ಹೌದು, ಹಾಸನದ ಡೈರಿ ಸಮೀಪವಿರುವ ಸತ್ಯಮಂಗಲ ಬಡಾವಣೆಯ ಹುಡುಗರು ನೆರೆಪೀಡಿತ ಪ್ರದೇಶಕ್ಕೆ ಸಹಾಯಹಸ್ತ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ರಾಜ್ಯದಲ್ಲಿ ಆರ್ಭಟಿಸಿದ ವರುಣನ ರೌದ್ರ ನರ್ತನಕ್ಕೆ ಕರ್ನಾಟಕದ ಹಲವು ಭಾಗ ತತ್ತರಿಸಿ ಹೋಗಿದ್ದವು. ದಶಕಗಳಿಂದ ಬರ ನೀಗಿಸಲು ಬಾರದ ಮಳೆರಾಯ ಕೇವಲ 4 ದಿನದಲ್ಲಿ ಬಂದು ಊರನ್ನೇ ಕೊಚ್ಚಿಕೊಂಡು ಹೋಗುವಂತೆ ಮಾಡಿ, ಅಲ್ಲಿನ ಜನರ ಬದುಕನ್ನ ಬೀದಿಗೆ ತಂದುಬಿಟ್ಟಿದ್ದ. ಮಳೆ ಬರಲಿ ಎಂದು ಪ್ರಾರ್ಥಿಸುತ್ತಿದ್ದವರು ಸಾಕಪ್ಪ ಮಳೆರಾಯ ನಿಲ್ಲಿಸು ನಿನ್ನ ರೌದ್ರ ನರ್ತನ ಎಂದು ಬೇಡಿಕೊಂಡಿದ್ದಾರೆ. ಇಂತಹ ಕುಟುಂಬಗಳಿಗೆ ಈ ಡೈರಿ ಸರ್ಕಲ್ ಹುಡುಗ್ರು ನೆರವಿನ ಹಸ್ತ ನೀಡಿದ್ದಾರೆ.
ಪ್ರವಾಹಪೀಡಿತ ಸಂತ್ರಸ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರವಷ್ಟೇ ಅಲ್ಲದೆ, ಖಾಸಗಿ ಸಂಸ್ಥೆಗಳಿಂದ ಹಿಡಿದು ರಾಜ್ಯದ ನಾನಾ ಭಾಗಗಳಿಂದ ಎಲ್ಲಾ ರೀತಿಯ ನೆರವು ಹರಿದು ಬರುತ್ತಿದೆ. ಕೆಲಸವಿಲ್ಲದೆ ಅಲೆದಾಡುತ್ತಿದ್ದ ಹುಡುಗ್ರು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಬಡಾವಣೆಗಳಿಗೆ ಭೇಟಿ ನೀಡಿ ಸುಮಾರು 7-8 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳನ್ನ ಸಂಗ್ರಹಿಸಿ ಲಾರಿಯಲ್ಲಿ ಖುದ್ದು ತಾವೇ ಹೋಗಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ವಿಭಿನ್ನವಾಗಿ ನೆರವು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಮೊದಲು ಸಂತ್ರಸ್ತರ ಕುಟುಂಬಗಳನ್ನ ಪಟ್ಟಿ ಮಾಡಿಕೊಂಡ ಇವರು, ಪ್ರತಿ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನ ಬಹಳ ಅಚ್ಚುಕಟ್ಟಾಗಿ ಪೂರೈಕೆ ಮಾಡ್ತಿದ್ದಾರೆ. ಬಾಗಲಕೋಟೆಯ ರಾಮತಾಳ, ಹಿರಮಾಗಿ, ಐಹೋಳೆ, ನೀಲಗುಮದ, ಶಿವಯೋಗಿ ಮಂದಿರ ಹೀಗೆ 5 ಗ್ರಾಮಗಳಿಗೆ ತೆರಳಿ ಪ್ರತಿ ಕುಟುಂಬಕ್ಕೆ ತಲಾ 1 ಕೆಜಿಯಂತೆ ಬೇಳೆ ಕಾಳು, ಆಹಾರ ಪದಾರ್ಥಗಳನ್ನ ವಿತರಣೆ ಮಾಡ್ತಿದ್ದಾರೆ. ಇದರ ಜೊತೆಗೆ ರಗ್ಗು, ಹಾಸಿಗೆ, ದಿಂಬು ಹೀಗೆ ಕುಟುಂಬದ ಅವಶ್ಯಕತೆಗೆ ತಕ್ಕಂತೆ ಒಂದೊಂದು ಬಾಕ್ಸ್ ಮಾಡಿ ಪ್ರತಿ ಮನೆಗೆ ಅಚ್ಚುಕಟ್ಟಾಗಿ ವಿತರಣೆ ಮಾಡ್ತಿದ್ದಾರೆ.