ಹಾಸನ: ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆ ನಡುವೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿವರೆಗೆ 2 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.
ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಬುಧವಾರ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿತ್ತು. ಆದರೂ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಒಳಗೆ ಬಿಡಲಾಯಿತು. ಪ್ರವೇಶ ನಿರ್ಬಂಧದ ವಿಚಾರ ಗೊತ್ತಿದ್ದ ಭಕ್ತರು ಬೆಳಗ್ಗೆ 6ರ ನಂತರ ಜಮಾಯಿಸತೊಡಗಿದರು. ಇದರಿಂದಾಗಿ ಉತ್ಸವ ಆರಂಭವಾಗಿ ಏಳು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಬಿಎಂ ರಸ್ತೆವರೆಗೆ ಸರತಿ ಸಾಲು ಕಂಡುಬಂತು. ಮಧ್ಯಾಹ್ನ ಒಂದರಿಂದ ಮೂರರವರೆಗೆ ನೈವೇದ್ಯ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಇದರಿಂದ ಮುಖ್ಯ ದ್ವಾರದಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು.
2 ಗಂಟೆ ನಂತರ ಸುರಿದ ಮಳೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಕಷ್ಟ ಪಡಬೇಕಾಯಿತು. ಸಾಮಾನ್ಯ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ವಾಟರ್ ಪ್ರೂಫ್ ಛಾವಣಿ ಹಾಕಲಾಗಿದೆ. ಆದರೆ ಸಾವಿರ ಮತ್ತು 300 ರೂ. ಟಿಕೆಟ್ ಪಡೆದವರಿಗೆ ಆಶ್ರಯದ ವ್ಯವಸ್ಥೆ ಇರಲಿಲ್ಲ. ದಿಢೀರ್ ಸುರಿದ ಮಳೆಯಿಂದಾಗಿ ನಿಂತಿದ್ದ ಭಕ್ತರು ಮಳೆಗೆ ನೆನೆಯಬೇಕಾಯಿತು. ನೈವೇದ್ಯ ಸಮಯದಲ್ಲಿ ಜೋರು ಮಳೆ ಸುರಿದ ಕಾರಣ ಸರತಿ ಸಾಲು ಸಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ಇದರಿಂದಾಗಿ ಕೆಲ ಮಹಿಳೆಯರು, ವೃದ್ಧರು ದರ್ಶನ ಮೊಟಕುಗೊಳಿಸಿ ಹೊರಬಂದರು.