ಹಾಸನ: ಇತಿಹಾಸ ಪ್ರಸಿದ್ಧ ಹಾಸನದ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಿದ್ದಾಳೆ. ಇಂದು ಮಧ್ಯಾಹ್ನ ಸರಿಸುಮಾರು 12.17ಕ್ಕೆ ಅಧಿದೇವತೆಯನ್ನು ಭಕ್ತರು ಕಣ್ತುಂಬಿಕೊಂಡರು.
ಈ ವೇಳೆ, ನಿರ್ಮಲಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಸೇರಿದಂತೆ ಕೆಲ ಭಕ್ತರು ತಾಯಿಯ ದರ್ಶನ ಪಡೆದು ಪುನೀತರಾದರು.
ಇದಕ್ಕೂ ಮುನ್ನ, ತಳವಾರ ವಂಶಸ್ಥರಾದ ನಂಜರಾಜ ಅರಸ್ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಅಕ್ಟೋಬರ್ 28ರಿಂದ ನವೆಂಬರ್ 6 ರತನಕ 10 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾಳೆ.
ನಾಳೆಯಿಂದ ಭಕ್ತರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಅಕ್ಟೋಬರ್ 29ರಿಂದ ನವೆಂಬರ್ 6 ರವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿದಿನ ಮಧ್ಯಾಹ್ನ 1ರಿಂದ 3ರವರೆಗೆ ನೈವೇದ್ಯ ಅರ್ಪಣೆ ಇರಲಿದೆ.