ಹಾಸನ: ಇಂದು ಜಿಲ್ಲಾಡಳಿತದ ಸಮ್ಮುಖದಲ್ಲಿ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ದೇಗುಲದ ಬಾಗಿಲು ತೆರೆಯುವ ಕಾರ್ಯ ವಿದ್ಯುಕ್ತವಾಗಿ ನಡೆಯಿತು.
ಪವಾಡಗಳನ್ನು ಸೃಷ್ಟಿ ಮಾಡುವ, ಕೇಳಿದ ವರಗಳನ್ನು ನೀಡುವ ಉತ್ತರ ಭಾರತದ ವೈಷ್ಣವಿ ದೇವಿಯಂತೆಯೇ ಹಾಸನಾಂಬೆ ದಕ್ಷಿಣ ಭಾರತದ ವೈಷ್ಣೋದೇವಿ ಎಂದೇ ಪ್ರಸಿದ್ಧಿಯಾಗಿದ್ದಾಳೆ. ಆಶ್ವಯುಜ ಮಾಸದ ಮೊದಲನೇ ಗುರುವಾರ ಪ್ರತಿ ವರ್ಷ ಹಾಸನಾಂಬೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ದೇವಾಲಯದ ವಿಶೇಷ ಏನೆಂದರೆ ಕಳೆದ ಬಾರಿ ಹಚ್ಚಿಟ್ಟ ದೀಪ ಈ ವರ್ಷವೂ ಕೂಡ ಉರಿಯುವ ಮೂಲಕ ಭಕ್ತರಿಗೆ ಹಾಸನಾಂಬೆ ದರ್ಶನ ಕೊಡುತ್ತಾಳೆ. ಹೀಗಾಗಿ ಮೊದಲ ದಿನದ ದರ್ಶನ ಪಡೆಯಲು ಕೇವಲ ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಕೂಡ ಭಕ್ತರು ಬಂದು ದರ್ಶನ ಪಡೆದು ಪುನೀತರಾಗುತ್ತಾರೆ.
ತಳವಾರ ಮನೆತನದ ನಂಜರಾಜ ಅರಸ್ ಕುಟುಂಬದವರು ಕಳೆದ ಐದಾರು ದಶಕಗಳಿಂದ ದೇವಿಯ ಭಕ್ತರಾಗಿದ್ದು, ಜೊತೆಗೆ ಬಾಗಿಲನ್ನು ತೆರೆಯುವ ಮುನ್ನ ತಾಯಿಗೆ ದೃಷ್ಟಿಯಾಗಬಾರದು ಎಂಬ ಕಾರಣಕ್ಕೆ ದೇವಾಲಯದ ಮುಂಭಾಗದಲ್ಲಿನ ಬಾಳೆ ಕಂದಿಗೆ ಪೂಜೆ ಸಲ್ಲಿಸಿ ಅದನ್ನು ಕಡಿಯುವ ಮೂಲಕ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ. ಪ್ರತಿವರ್ಷ ಅಪರಾಹ್ನ 12:30ರಿಂದ 12:45ರ ಒಳಗೆ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯುವ ಮೂಲಕ ದೇವಿ ದರ್ಶನ ಕೊಡುತ್ತಿದ್ದಳು. ಈ ಬಾರಿ 30 ನಿಮಿಷ ಮುಂಚೆಯೇ ದೇವಿಯ ದರ್ಶನಕ್ಕೆ ಬಾಗಿಲು ತೆರೆಯಲಾಗಿದ್ದು, 12:16ಕ್ಕೆ ದೇವಿಯ ವಿಶ್ವರೂಪ ದರ್ಶನವನ್ನು ಜಿಲ್ಲಾಡಳಿತ ಪಡೆಯುವ ಮೂಲಕ ದೇವಾಲಯಕ್ಕೆ ಬಂದಿದ್ದ ಕೆಲವು ದೇವಿಯ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಯಿತು.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಪ್ರೀತಮ್ ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ದರ್ಶನದ ವೇಳೆ ಉಪಸ್ಥಿತರಿದ್ದರು.
ನಾನು ಪ್ರತಿ ವರ್ಷವೂ ಕೂಡ ದೇವಾಲಯಕ್ಕೆ ಬಂದು ದರ್ಶನ ಪಡೆಯುತ್ತಿದ್ದೆ. ಈ ಬಾರಿ ಯಡಿಯೂರಪ್ಪನವರ ಆಶೀರ್ವಾದದಿಂದ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಹಾಗಾಗಿ ದರ್ಶನವನ್ನು ಮೊದಲ ಪಡೆಯುವ ಭಾಗ್ಯ ನನಗೆ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ತಾಯಿಯ ಆಶೀರ್ವಾದ ಎಂದರೆ ತಪ್ಪಾಗುವುದಿಲ್ಲ. ಬಾಗಿಲು ತೆರೆದ ಬಳಿಕ ಗರ್ಭಗುಡಿಯಲ್ಲಿ ಹಾಸನಾಂಬ ದೇವಾಲಯದ ಎರಡು ಬದಿಯ ದೀಪ ಪ್ರಕಾಶಮಾನವಾಗಿ ಉರಿಯುತ್ತಿದ್ದು, ಇದನ್ನು ಮೊದಲು ನಾನೇ ನೋಡಿದ್ದು ನನ್ನ ಸೌಭಾಗ್ಯ. ಪ್ರತಿವರ್ಷ ಕೂಡ 5 ರಿಂದ 6 ಲಕ್ಷ ಮಂದಿ ಭಕ್ತಾದಿಗಳು ದರ್ಶನದ ಭಾಗ್ಯ ಪಡೆಯುತ್ತಿದ್ದರು. ಅಂದರೆ ಸುಮಾರು 50ರಿಂದ 60 ಸಾವಿರ ಪ್ರತಿನಿತ್ಯ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಈ ಬಾರಿಯ ದರ್ಶನವಿಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವ ಕಾರಣ ಈ ಬಾರಿ ಸಾರ್ವಜನಿಕರಿಗೆ ದರ್ಶನ ಭಾಗ್ಯವಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದರು.
ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಭಕ್ತರು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇನ್ನು ದೇವಾಲಯಕ್ಕೆ ಪ್ರವೇಶ ನೀಡುವುದನ್ನು ಕೇವಲ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ನೀಡಿದರೆ ಸಾಲದು. ಪ್ರವೇಶ ನಿಷೇಧ ಮಾಡಿದರೆ ಎಲ್ಲರಿಗೂ ಮಾಡಿ. ಇಲ್ಲದಿದ್ದರೆ ಯಾರಿಗೂ ಪ್ರವೇಶ ನೀಡಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.