ಹಾಸನ : ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಜಿಲ್ಲೆಯ 8 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲವೂ ನೆಗೆಟಿವ್ ವರದಿ ಬಂದಿರುತ್ತದೆ. ಮುಂಜಾಗ್ರಾತ ಕ್ರಮವಾಗಿ ಚನ್ನರಾಯಪಟ್ಟಣ ತಾಲೂಕಿನ 4 ಗ್ರಾಮಗಳನ್ನು ಸೀಜ್ ಮಾಡಿ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಕೋವಿಡ್-19 ಪಾಸಿಟಿವ್ ಎಂದು ಪತ್ತೆಯಾಗಿರುವ ಸೋಂಕಿತನೊಂದಿಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಎಲ್ಲಾ 9 ಮಂದಿಯನ್ನು ಗುರುತಿಸಲಾಗಿದೆ. ಅದರಲ್ಲಿ ಒಬ್ಬರು ಮುಂಬೈನಲ್ಲಿದ್ದು, ಇನ್ನುಳಿದ 8 ಮಂದಿಯ ಗಂಟಲು ದ್ರವ್ಯವನ್ನು ತಪಾಸಣೆ ಮಾಡಲಾಗಿದೆ. ಅಲ್ಲದೆ 2ನೇ ಹಂತದ ಸಂಪರ್ಕ ಹೊಂದಿದ್ದ 21 ಮಂದಿಯನ್ನು ಹೋಂ ಕ್ವಾರಟೈನ್‌ನಲ್ಲಿಸಿ ಅವರನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ 25 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಎಂದು ತಿಳಿಸಿದರು.
ಎಲ್ಲಾ ಪ್ರಾಥಮಿಕ ಹಾಗೂ 2ನೇ ಹಂತದ ಸಂಪರ್ಕ ಹೊಂದಿದ್ದವರನ್ನು 5ನೇ ದಿನದಂದು ಪರೀಕ್ಷೆಗೊಳಪಡಿಸಲಾಗಿದೆ. ನಿಯಾಮಾನುಸಾರ 12ನೇ ದಿನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದ ನಂತರ ನೆಗೆಟಿವ್ ವರದಿ ಬಂದ್ರೆ ಆಸ್ಪತ್ರೆ ಕ್ವಾರಟೈನ್‌ನಲ್ಲಿರುವವರನ್ನು ಕಳುಹಿಸಿಕೊಡಲಾಗುವುದು ಎಂದರು.
ಪ್ರಾಥಮಿಕ ಹಂತದ ಸಂಪರ್ಕ ಹೊಂದಿದ್ದ 8 ಮಂದಿ ಚನ್ನರಾಯಪಟ್ಟಣ ತಾಲೂಕಿನ ಹೆಗ್ಗಡ್ಡಹಳ್ಳಿ, ನುಗ್ಗೆಹಳ್ಳಿ ಹೋಬಳಿಯ ಕಗ್ಗೆರೆ ಗ್ರಾಮ ಮತ್ತು ಶ್ರವಣಬೆಳಗೊಳ ಹೋಬಳಿಯ ದೇವರ ಹಳ್ಳಿ ಮತ್ತು ಶಿವಪುರ ಗ್ರಾಮಗಳಿಗೆ ಸೇರಿದ್ದು, ಈ ಗ್ರಾಮಗಳ ನಡುವಿನ ಸಂಚಾರ ನಿಷೇಧಿಸಿ ಮುಂಜಾಗ್ರಾತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಈವರೆಗೂ 10,850 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಇವರಲ್ಲಿ ಒಬ್ಬರಿಗೆ ಜ್ವರದ ಲಕ್ಷಣಗಳು ಕಂಡು ಬಂದಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. 2933 ಬಾಣಂತಿಯರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಯಾವುದೇ ರೀತಿಯ ಸೋಂಕು ಇರುವುದಿಲ್ಲ ಎಂದರು.
ಈವರೆಗೂ ಹಾಸನದ ಜನತೆ ಲಾಕ್ಡೌನ್ಗೆ ಸಂಪೂರ್ಣ ಸಹಕರಿಸಿದ್ದಾರೆ. ಮೇ.3ರವರೆಗೂ ಕೂಡ ಇದೇ ರೀತಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗದೇ, ಸಾಮಾಜಿಕ ಅಂತರ ಕಾಪಾಡಿಕೊಂಡು ಬಂದರೆ ಇನ್ನೂ ಹೆಚ್ಚಿನ ಸಡಿಲಿಕೆ ಸಿಕ್ಕಿ ಜನ ಜೀವನ ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.