ಹಾಸನ: ರೇವಣ್ಣನವರನ್ನ ಡಿಸಿಎಂ ಮಾಡೋಕೆ ಕುಮಾರಸ್ವಾಮಿ ಒಪ್ಪಲಿಲ್ಲ ಎಂಬ ಜಿ ಟಿ ದೇವೇಗೌಡ ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ವಿಚಾರ ಬಂದಾಗ ನಾನೇ ಸುಪ್ರಿಂ. ಕೆಲವರನ್ನ ಹಿಂದೆ- ಮುಂದೆ ವಿಚಾರಿಸದೇ ಡಸ್ಟ್ ಬಿನ್ ನಲ್ಲಿದ್ದವರನ್ನ ಕರೆತಂದು ಕುಮಾರಸ್ವಾಮಿ ಚುನಾವಣೆಗೆ ನಿಲ್ಲಿಸ್ತಾರೆ. ಗೆದ್ದ ಮೇಲೆ ಅವು ಹಳೇ ರೇಡಿಯೋ ಹಾಕೊಂಡು ಬೈತಾವೆ ಎಂದು ಹರಿಹಾಯ್ದರು.
ಕುಮಾರಸ್ವಾಮಿ ಧರ್ಮರಾಯ ಇದ್ದ ಹಾಗೆ, ನನ್ ಮಾತು ಕೇಳ್ತಾರಾ ಅವರು. ಎಂತೆಂಥವರನ್ನೋ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಅವರ ಬ್ಯಾಗ್ರೌಂಡ್ ತಿಳಿದುಕೊಳ್ಳದೆ ಟಿಕೆಟ್ ಕೊಟ್ಟಿದ್ದಾರೆ. ನಾನೇನು ಮಾಡಲಿ. ಇದು ದೇವೇಗೌಡರ ಮತ್ತು ಕುಮಾರಸ್ವಾಮಿಯ ದೌರ್ಭಾಗ್ಯ ಎಂದರು.
ಉಪ ಚುನಾವಣೆಯಲ್ಲಿ ಮೈತ್ರಿ ವಿಚಾರ ಸಂಬಂಧ ಮಾತನಾಡಿದ ಅವರು, ದೇವೇಗೌಡರು ಮತ್ತು ಕುಮಾರಸ್ವಾಮಿ ತೀರ್ಮಾನವೇ ಅಂತಿಮ ಎಂದ ಅವರು, ಯಡಿಯೂರಪ್ಪ ಸರ್ಕಾರ ಬಂದಿರೋದು ಹಾಸನದ ಯೋಜನೆಗಳನ್ನ ನಿಲ್ಲಿಸೋಕೆ. ಹಾಸನದಲ್ಲಿ ನಾಲ್ಕು ಸಾವಿರ ನಿವೇಶನ ಮಾಡಲು ಉದ್ದೇಶಿಸಿದ್ದೆ. ಆದರೆ, ಯಡಿಯೂರಪ್ಪ ಎಲ್ಲವನ್ನೂ ನಿಲ್ಲಿಸಿದ್ದಾರೆ. ಅವರ ಕೆಲಸವೇ ಅದು ಎಂದು ವ್ಯಂಗ್ಯವಾಡಿದರು.