ಅರಕಲಗೂಡು (ಹಾಸನ): ಮದುವೆ ಮನೆಯಲ್ಲಿ ಮಾಸ್ಕ್ ಧರಿಸದೇ ಹಸಮಣೆ ಏರಿದ್ದ ವಧುವಿಗೆ ತಹಶೀಲ್ದಾರ್ ದಂಡ ವಿಧಿಸಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಲ್ಲಿ ನಡೆದಿದೆ.
ಕೊರೊನಾ ನಿಯಮಾವಳಿ ಪ್ರಕಾರ ಮದುವೆ ಮನೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವಿದ್ದು, ವಧು ಮಾಸ್ಕ್ ಧರಿಸದೇ ನಿಂತಿದ್ದ ಹಿನ್ನೆಲೆ ದಂಡ ವಿಧಿಸಲಾಗಿದೆ.
ಅರಕಲಗೂಡು ತಾಲೂಕಿನ ರಾಮನಾಥಪುರದ ಸ್ವಾಗತ್ ಕಲ್ಯಾಣ ಮಂಟಪದಲ್ಲಿ ಮೊದಲೇ ನಿಗದಿಯಾಗಿದ್ದ ವಿವಾಹ ಸಂಬಂಧ ಮಂಟಪಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರೇಣುಕುಮಾರ್ ಅವರು ವಧು ಮಾಸ್ಕ್ ಹಾಕದೇ ಇರುವುದನ್ನು ಕಂಡು 100 ರೂಪಾಯಿ ದಂಡ ವಿಧಿಸಿದ್ದಾರೆ.
ಅಲ್ಲದೆ ಮದುವೆ ಮನೆಯಲ್ಲಿ ಕೊರೊನಾ ನಿಯಮವನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೇ ಕಲ್ಯಾಣ ಮಂಟಪ ಬಂದ್ ಮಾಡುವ ಎಚ್ಚರಿಕೆ ನೀಡಿದರು.