ಹಾಸನ: ಎಲ್ಲೆಡೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ರಂಗೇರಿದೆ. ಅಧಿಕಾರ ಹಿಡಿಯಲು ಹಲವರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇಂದು ಹಾಸನ ತಾಲೂಕಿನ ಮಡೆನೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಬಿಸಿಎಂ(ಎ)ನಿಂದ ಇಬ್ಬರು ಆಕಾಂಕ್ಷಿಗಳಿದ್ದರು. ಭಾಗ್ಯಮ್ಮ ಕೂಡ ಪ್ರಬಲ ಆಕಾಂಕ್ಷಿಯೇ. ಆದ್ರೆ ಭಾಗ್ಯಮ್ಮ ಬೆಂಗಳೂರಿಗೆ ಹೋದವರು ಹಿಂತಿರುಗಲಿಲ್ಲ.
ಹಾಸನ ಜಿಲ್ಲೆಯಲ್ಲಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆ ದಿನಾಂಕವೂ ನಿಗದಿಯಾಗಿದೆ. 14 ಸದಸ್ಯರಿರುವ ಹಾಸನ ತಾಲೂಕಿನ ಮಡೆನೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಬಿಸಿಎಂ(ಎ)ಯಿಂದ ಭಾಗ್ಯಮ್ಮ ಹಾಗೂ ಲೋಕೇಶ್ ಆಕಾಂಕ್ಷಿಗಳಾಗಿದ್ದರು.
ಕಾರೇಕೆರೆಯಿಂದ ಜಯ ಗಳಿಸಿದ್ದ ಭಾಗ್ಯಮ್ಮ ಚುನಾವಣೆ ನಂತರ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಜ. 28ರಂದು ಸ್ವಗ್ರಾಮ ಕಾರೇಕೆರೆಗೆ ಬಂದಿದ್ರು. ಈ ವೇಳೆ ನನ್ನ ತಾಯಿಯನ್ನ ಅಪಹರಣ ಮಾಡಿದ್ದಾರೆ ಎಂದು ಪುತ್ರ ಜಯರಾಂ ಆರೋಪಿಸಿದ್ದಾರೆ.
ಮಡೇನೂರು ಗ್ರಾಮದ ಲೋಕೇಶ್ ಎಂಬುವವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾರೇಕೆರೆ ಗ್ರಾಮದ ವೆಂಕಟೇಶ, ಸ್ವಾಮೀಗೌಡ, ಸುರೇಂದ್ರ ಎಂಬುವವರು ನಮ್ಮ ತಾಯಿಯನ್ನು ಅಪಹರಣ ಮಾಡಿ ನಮಗೆ ಮೋಸ ಮಾಡಿದ್ದಾರೆ. ಅವರು ಎಲ್ಲಿದ್ದಾರೆ ಗೊತ್ತಿಲ್ಲ, ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಅವರನ್ನು ಹುಡುಕಿಕೊಡಬೇಕೆಂದು ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾಗ್ಯಮ್ಮ ಇಂದು ನಡೆಯುವ ಚುನಾವಣೆಗೆ ಸ್ಪರ್ಧಿಸಿ ಅಧ್ಯಕ್ಷರಾಗುತ್ತಿದ್ದರು. ಆದರೆ ಅಧಿಕಾರದ ಆಸೆಗಾಗಿ ಅವರನ್ನು ಅಪಹರಿಸಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ದಿದ್ದಾರೆ ಯಾರಿಗೂ ಗೊತ್ತಿಲ್ಲ. ಭಾಗ್ಯಮ್ಮಗೆ ಆರೋಗ್ಯ ಸಮಸ್ಯೆಯಿದೆ. ಪ್ರತಿದಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಭಾಗ್ಯಮ್ಮಗೆ ಏನಾದ್ರು ಆದ್ರೆ ನಾವು ಯಾರ ಮೇಲೆ ದೂರು ದಾಖಲು ಮಾಡಿದ್ದೇವೆಯೋ ಅವರೇ ಹೊಣೆ ಅಂತಿದ್ದಾರೆ ಗ್ರಾಮಸ್ಥರು.
ಇಂದು ನಿಗದಿಯಂತೆ ಮಡೆನೂರು ಗ್ರಾಪಂ ಚುನಾವಣೆ ನಡೆದಿದೆ. ಭಾಗ್ಯಮ್ಮ ಚುನಾವಣೆಗೆ ಗೈರಾದ್ದರಿಂದ ಲೋಕೇಶ್ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಶಾಂತಿಗ್ರಾಮ ಪೊಲೀಸರು, ತನಿಖೆ ಆರಂಭಿಸಿದ್ದಾರೆ.