ಹಾಸನ: ನಗರದಲ್ಲಿ ಮತ್ತೊಂದು ಅತ್ಯುತ್ತಮವಾದ ಬಡಾವಣೆ ನಿರ್ಮಾಣಕ್ಕೆ ಸರ್ಕಾರವು ಸಂಪೂರ್ಣ ಸಹಕಾರ ಕೊಡಲು ಸಿದ್ಧವಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಸಚಿವ ಬಿ.ಎ. ಬಸವರಾಜು ಅಭಯಹಸ್ತ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡಾವಣೆ ನಿರ್ಮಿಸಲು ಕಡತಗಳನ್ನು ಜಿಲ್ಲಾಧಿಕಾರಿಗಳು ತಕ್ಷಣ ಅನುಮೋದನೆ ನೀಡಿ, ನಗರದಲ್ಲಿ ಅತ್ಯುತ್ತಮ ಬಡಾವಣೆ ನಿರ್ಮಾಣ ಮಾಡಲು ಸರ್ಕಾರ ಸಹಕಾರ ಕೊಡಲು ಸಿದ್ಧವಾಗಿದೆ ಎಂದರು.
ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಉತ್ತಮ ಬಡಾವಣೆ ನಿರ್ಮಾಣವಾಗಲಿದೆ. ಹಾಸನ ಸುತ್ತ ಮುತ್ತ ಇರುವ ಭೂಮಿ 25 ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಬಡಾವಣೆ ಮಾಡಲು ಅನುಮತಿ ಕೊಡಬಾರದು ಎಂದು ಇಡೀ ರಾಜ್ಯದಲ್ಲಿ ಇಂತಹ ನಿರ್ಧಾರವನ್ನು ಪ್ರಾಧಿಕಾರ ತೆಗೆದುಕೊಳ್ಳಬೇಕಾಗಿದ್ದು, ವಿಶೇಷವಾಗಿ ಜಿಲ್ಲಾಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ ಎಂದರು.
ಸರ್ಕಾರದ ವತಿಯಿಂದ ಹೆಚ್ಚು ಬಡಾವಣೆ ನಿರ್ಮಾಣವಾಗಿ, ಪ್ರಾಧಿಕಾರವು ಹೆಚ್ಚು ಸಂಪನ್ಮೂಲ ಕ್ರೂಢೀಕರಿಸಲಿ ಎಂಬ ದೃಷ್ಠಿಯಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದಾಗಿದೆ. ನಿವೇಶನದ ಅಭಿವೃದ್ಧಿ ಬಗ್ಗೆ ವಿಧಾನ ಸಭೆಯ ಮುಂದಿಟ್ಟು ಅನುಮೋದನೆ ಪಡೆದು, ಇನ್ನು ಎರಡು, ಮೂರು ತಿಂಗಳಲ್ಲಿ ಅಭಿವೃದ್ಧಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಪತ್ರಕರ್ತರಿಗೆ ಇದುವರೆಗೂ ಯಾವ ನಿವೇಶನ ಕೊಟ್ಟಿಲ್ಲ. ಈ ನಿಟ್ಟಿನಲ್ಲಿ ಗಣನೆಗೆ ತೆಗೆದುಕೊಂಡಿದ್ದು, ಒಂದು ಸಾವಿರ ಎಕರೆಯಲ್ಲಿ ಗೃಹ ನಿರ್ಮಾಣ ಮಾಡಿದರೇ ಅದರಲ್ಲಿ ಶೇ. 5ರಷ್ಟು ನಿವೇಶನ ಸರ್ಕಾರ ನಿಗಧಿ ಮಾಡುವ ದರದಲ್ಲಿ ಮೀಸಲಿಟ್ಟು ಕೊಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನುಡಿದರು.
ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ನೀಡಲು ಸರ್ಕಾರ ನಗರದಲ್ಲಿ 119 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಕೆಲ ತಿಂಗಳುಗಳಲ್ಲಿ ಕಾಮಗಾರಿ ಮುಗಿಯುವ ಭರವಸೆ ಇದೆ. ಅಮೃತ ಯೋಜನೆ ಕಾಮಗಾರಿ ವೇಳೆ ಎಲ್ಲೆಲ್ಲಿ ರಸ್ತೆಗಳು ಹಾಳಾಗಿದೆ. ಎಲ್ಲವನ್ನು ಸರಿಪಡಿಸಲಾಗುವುದು ಎಂದರು.
ಅರಕಲಗೂಡು ಮತ್ತು ಆಲೂರು ಭಾಗಗಳಲ್ಲಿ ಎರಡು ದಿನಕ್ಕೊಮ್ಮೆ ನೀರನ್ನು ಕೊಡುವುದರ ಬಗ್ಗೆ ದೂರುಗಳು ಬಂದಿದೆ. ಜಿಲ್ಲೆಯಲ್ಲಿ ಹೇಮಾವತಿ, ಯಗಚಿ ಅಣೆಕಟ್ಟು ಇರುವುದರಿಂದ ಪ್ರತಿದಿನ ನೀರನ್ನು ಕೊಡುವಂತೆ ಸಭೆಯಲ್ಲಿ ಹೇಳಲಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿರುವುದಾಗಿ ಹೇಳಿದರು.
ಜಿಲ್ಲಾಧಿಕಾರಿಗಳ ಜೊತೆ ನಡೆಸಲಾದ ಸಭೆಯಲ್ಲಿ ಕೊರೊನಾ ವಿಚಾರವಾಗಿ ಚರ್ಚೆ ಮಾಡಿದ್ದು, ಯಾವ ರೋಗಿಯು ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ರೋಗಿಗೆ ಹಾಸಿಗೆ ಕೊರತೆ, ಚುಚ್ಚು ಮದ್ದು ಸೇರಿದಂತೆ ಎಲ್ಲವನ್ನು ಸಮರ್ಪಕವಾಗಿ ಪೂರೈಸುವ ಕೆಲಸ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.