ಹಾಸನ: ಮೇ ತಿಂಗಳಿನಿಂದ ಪ್ರಾರಂಭವಾಗುವ ಆಲೂಗಡ್ಡೆ ಬಿತ್ತನೆ ಬೀಜಕ್ಕೆ ಸರ್ಕಾರ ಕೂಡಲೇ ಸಬ್ಸಿಡಿ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ತರಿಸಿದ್ದಾರೆ. ಆದರೆ ಅದಕ್ಕೆ ಸಬ್ಸಿಡಿ ಬೇಕು. ಸೆಣಬಿಗೆ ಶೇ,50 ರಷ್ಟು ಸಬ್ಸಿಡಿ ಕೊಟ್ಟಿದ್ದರು. ಈಗ ಕ್ಯಾನ್ಸಲ್ ಮಾಡಿದ್ದಾರೆ. ಮೇ ತಿಂಗಳ ಮೊದಲ ವಾರದಿಂದ ರೈತರು ಆಲೂ ಬಿತ್ತನೆ ಮಾಡಲು ಪ್ರಾರಂಭಿಸುವುದರಿಂದ ಆಲೂಗಡ್ಡೆ ಸಬ್ಸಿಡಿಯನ್ನು ಕೂಡಲೇ ಘೋಷಣೆ ಮಾಡಬೇಕು ಎಂದಿದ್ದಾರೆ.
ಜನಸಾಮಾನ್ಯರಿಗೆ ಇಂದು ಸಿಮೆಂಟ್ ಮತ್ತು ಸ್ಟೀಲನ್ನು ತಮಗೆ ಇಷ್ಟ ಬಂದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. 50 ಕೆ.ಜಿ. ಸಿಮೆಂಟ್ ಬೆಲೆ 300 ರಿಂದ 350 ರೂ,ಗಳು ಇದ್ದರೆ ಈಗ ಬಿಲ್ ನೀಡದೇ 500 ರಿಂದ 600 ರೂ.ಗಳಿಗೆ ಮಾರುತ್ತಿದ್ದು, ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲವೇ ಎಂದು ಪ್ರಶ್ನಿಸಿದರು.
ಜಿಎಸ್ಟಿಯನ್ನು ಹಳೆ ದರಕ್ಕೆ ನಮೂದಿಸಿ, ಹೊಸ ಬೆಲೆಗೆ ಬಿಲ್ ಹಾಕುತ್ತಿದ್ದಾರೆ. ಇನ್ನು ಕಬ್ಬಿಣ 50 ಸಾವಿರದವರೆಗೂ ದಾಟಿದ್ದು, ಎಲ್ಲಾ ಬ್ಲಾಕ್ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಎಲ್ಲೆಲ್ಲಿ ಸಿಮೆಂಟ್ ಸ್ಟಾಕ್ ಇಟ್ಟಿದ್ದಾರೆ ಪೊಲೀಸ್ ಅಧಿಕಾರಿಗಳು ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ತಮ್ಮ ಕಚೇರಿ ಬಿಟ್ಟು ಸಿಮೆಂಟ್ ಗೋಡೌನ್ಗಳಿಗೆ ಹೋಗಿ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಡೀಲರ್ಗಳನ್ನು ಕರೆದು ಸಭೆ ಮಾಡಿ ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ಸಿಮೆಂಟ್ ಮತ್ತು ಸ್ಟೀಲ್, ಕಬ್ಬಿಣ ಸಣ್ಣ ಪುಟ್ಟ ಕಾಮಗಾರಿಗೆ ಸರಿಯಾದ ಬೆಲೆಯಲ್ಲಿ ದೊರಕುವಂತಾಗಲಿ ಎಂದು ಒತ್ತಾಯಿಸಿದರು.