ಹಾಸನ: ಬೇಲೂರು-ಹಾಸನ ಮಾರ್ಗ 33 ಕಿ.ಮೀ ರಸ್ತೆ ಕಾಮಗಾರಿಗೆ 216 ಕೋಟಿ ರೂ. ಬಿಡುಗಡೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದಿದ್ದು, ಇದಕ್ಕೆ ಸಚಿವ ನಿತಿನ್ ಗಡ್ಕರಿಯವರು ಸ್ಪಂದಿಸಿ, ಎರಡು ಪ್ಯಾಕೇಜು ಮಾಡುವತ್ತ ಗಮನ ಹರಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನರಾಯಪಟ್ಟಣ, ಅರಕಲಗೂಡು ಬೈಪಾಸ್ ರಸ್ತೆಗೂ ಕೂಡ ಮನವಿ ಹೋಗಿದೆ. ನಾನು ಲೋಕೋಪಯೋಗಿ ಸಚಿವನಾಗಿ 14 ತಿಂಗಳು ಇದ್ದಾಗ ಜಿಲ್ಲೆಗೆ ಏನೇನು ಅಭಿವೃದ್ಧಿ ಮಾಡಬೇಕೋ ಎಲ್ಲಾ ಮಾಡಲಾಗಿದೆ. ಆ ವೇಳೆ ಸಹಕರಿಸಿದ್ದ ಕೇಂದ್ರ ಸಚಿವ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸ್ಮರಿಸಿಕೊಂಡರು.
ಪತ್ರಕರ್ತರಿಗೂ ನೆರವು ನೀಡಿ:
ಕೊರೊನಾ ಸಂದರ್ಭದಲ್ಲಿ ಎಲ್ಲಾ ವೃತ್ತಿಪರರ ಬಗ್ಗೆ ಚಿಂತನೆ ಮಾಡಿದಂತೆ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಮಾಧ್ಯಮಗಳತ್ತಲೂ ಸರ್ಕಾರ ಗಮನ ನೀಡಿ ಸ್ಪಂದಿಸಬೇಕು. ರಾಜ್ಯ ಮತ್ತು ಜಿಲ್ಲಾ ಪತ್ರಿಕೆ ಇರಬಹುದು. ಕಳೆದ ಮೂರ್ನಾಲ್ಕು ತಿಂಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಏನಾದರೂ ಕೊರೊನಾ ತಗುಲಿರುವ ಪರಿಸ್ಥಿತಿ ಬಗ್ಗೆಯೂ ಯೋಚಿಸಬೇಕು. ಸರ್ಕಾರ ಎಲ್ಲಾ ವೃತ್ತಿಪರರಿಗೆ ನೀಡಿರುವಂತೆ ಪತ್ರಕರ್ತರಿಗೂ ತಿಂಗಳಿಗೆ 10 ಸಾವಿರ ರೂ. ಪರಿಹಾರ ನೀಡಿ ಆರ್ಥಿಕ ಸಹಕಾರ ನೀಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗುವುದು. ಸರ್ಕಾರ ಕೂಡಲೇ ಈ ಬಗ್ಗೆ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇನ್ನು ರಾಜ್ಯದಲ್ಲಿ ದಿನೇ -ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಎಷ್ಟೇ ರೋಗಿಗಳು ಆಸ್ಪತ್ರೆಗೆ ಬಂದರೂ ಉದಾಸೀನ ಮಾಡದೇ ಸರ್ಕಾರವೇ ವೆಚ್ಚವನ್ನು ಭರಿಸಬೇಕು ಎಂದು ಅವರು ಆಗ್ರಹಿಸಿದರು.