ಅರಕಲಗೂಡು: ಸರ್ಕಾರ ಕೂಡಲೇ ಖಾಸಗಿ ಶಾಲೆಗಳ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟಕ್ಕೆ ಇಳಿಯಬೇಕಾದೀತು ಎಂದು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಜಿಲ್ಲಾ ಪ್ರದಾನ ಕಾರ್ಯದರ್ಶಿ ಗಂಗಾಧರ್ ಎಚ್ಚರಿಸಿದ್ದಾರೆ.
ಅನುದಾನರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿ ದರ್ಜೆ ನೌಕರರು ಮತ್ತು ಶಾಲಾ ವಾಹನಗಳ ಚಾಲಕರಿಗೆ ಆಹಾರ ಕಿಟ್ ವಿತರಣೆ ಮಾಡಿದ ನಂತರ ಮಾತನಾಡಿ, ಇಂದು ಎದುರಾಗಿರುವ ಅನಿವಾರ್ಯ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ಅಸಹಾಯಕ ಸ್ಥಿತಿ ತಲುಪಿದ್ದಾರೆ.
ಅದರಂತೆ ಶಾಲಾ ಆಡಳಿತ ಮಂಡಳಿಗಳೂ ಸಂಕಷ್ಟಕ್ಕೆ ಸಿಲುಕಿವೆ. ಆದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲ ರೀತಿಯಲ್ಲೂ ಹಲವು ಆರೋಪಗಳನ್ನು ಎದುರಿಸಬೇಕಿದೆ. ಕೆಲವೇ ವ್ಯಕ್ತಿಗಳು, ಸಂಸ್ಥೆಗಳು ಮಾಡುವ ಕಾರ್ಯಕ್ಕೆ ಎಲ್ಲರನ್ನೂ ತಪ್ಪಿತಸ್ಥರಂತೆ ನೋಡುವುದು ಸರಿಯಲ್ಲ ಎಂದರು.