ಸಕಲೇಶಪುರ(ಹಾಸನ): ಭಾನುವಾರದ ಲಾಕ್ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಜನರು ಲಾಕ್ಡೌನ್ಗಾಗಿ ಕಾಯುತ್ತಿದ್ರಾ ಎಂಬ ಅನುಮಾನ ಮೂಡಿಸುವ ರೀತಿ ಪಟ್ಟಣ ಸಂಪೂರ್ಣ ಬಂದ್ ಆಗಿತ್ತು. ಏಕೆಂದರೆ ಜನರು ಲಾಕ್ಡೌನ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಲಾಕ್ಡೌನ್ ಘೋಷಣೆಯಾದ ಬೆನ್ನಲ್ಲೇ ಜನನಿಬಿಡ ರಾಷ್ಟ್ರೀಯ ಹೆದ್ದಾರಿ-75 ಸೇರಿದಂತೆ, ಇತರ ರಸ್ತೆಗಳು ವಾಹನ ಸಂಚಾರ ಹಾಗೂ ಜನರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿತ್ತು. ಅಗತ್ಯ ವಸ್ತುಗಳ ಸೇವೆಗಳಿಗೆ ಮಾತ್ರ ತಾಲೂಕು ಆಡಳಿತ ಅನುಮತಿ ನೀಡಿದ್ದರೂ ಕೂಡಾ ಜನರು ಮನೆ ಬಿಟ್ಟು ಹೊರ ಬರಲಿಲ್ಲ.
ಮೀನು ಮತ್ತು ಮಾಂಸ ಖರೀದಿಗೆ ಕೆಲವು ಜನರು ಬಂದಿದ್ದು ತರಕಾರಿ, ಹಣ್ಣು, ದಿನಸಿ ಅಂಗಡಿಗಳಿಗೆ ಜನರು ಬರದ ಕಾರಣ ಮಧ್ಯಾಹ್ನದ ನಂತರ ದಿನಸಿ ಅಂಗಡಿಗಳ ಮಾಲೀಕರು ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳಿದರು. ಗ್ರಾಮಾಂತರ ಪ್ರದೇಶಗಳು ಕೂಡಾ ಬಂದ್ ಆಗಿದ್ದು ಇಂದಿನ ಲಾಕ್ಡೌನ್ಗೆ ಜನತೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬವನ್ನು ಆಚರಿಸಿದ್ದು ಪ್ರಾರ್ಥನೆಗಾಗಿ ಮಸೀದಿಗೆ ತೆರಳಲು ಅವಕಾಶ ಇಲ್ಲದ ಕಾರಣ ತಮ್ಮ ಮನೆಗಳಲ್ಲೇ ಹಬ್ಬವನ್ನು ಸರಳವಾಗಿ ಆಚರಿಸಿದರು.