ಹಾಸನ : ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಘಟನೆಗಳು ಮಾಸುವ ಮುನ್ನವೇ ಹಾಸನದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ಕಟ್ಟಿ ಸ್ಫೋಟಗೊಂಡು ಓರ್ವ ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ತೀವ್ರತೆಗೆ ವ್ಯಕ್ತಿಯ ಮೃತದೇಹ ಮುನ್ನೂರು ಮೀಟರ್ ದೂರದವರೆಗೆ ಹಾರಿ ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಎಸ್ಪಿ ನಂದಿನಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರತಿಕ್ರಿಯಿಸಿರುವ ಅವರು, ಈ ಸ್ಫೋಟಕ ಸಂಗ್ರಹಗಾರಕ್ಕೆ ಲೈಸೆನ್ಸ್ ಇತ್ತು ಎಂದು ತಿಳಿಸಿದ್ದಾರೆ.
ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ, ಕಳೆದ ತಿಂಗಳು ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೆ. ಆದರೂ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.