ಹಾಸನ: ಆನ್‌ಲೈನ್ ಅಪ್ಲಿಕೇಶನ್ ಬಳಸಿ ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಐವರು ಆರೋಪಿಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ಆಕಾಶ್ (20), ಕುಮಾರಸ್ವಾಮಿ (20), ಪೂರ್ಣಚಂದ್ರ ತೇಜಸ್ವಿ (20), ಅವಿನಾಶ (21), ನಿರಂಜನ್ (24) ಬಂಧಿತ ಆರೋಪಿಗಳು. ಇವರಲ್ಲಿ ಆರೋಪಿ ಆಕಾಶ್ ಗ್ರಾಮ ಪಂಚಾಯಿತಿಯೊಂದರಲ್ಲಿ ಡಾಟಾ ನಮೂದು ಮಾಡುವ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಬಂಧಿತರಿಂದ 5 ಮೊಬೈಲ್, ನೋಟ್ ಬುಕ್ ವಶಕ್ಕೆ ಪಡೆಯಲಾಗಿದೆ. ಸತ್ಯಮಂಗಲ ಬಡಾವಣೆಯ ಕಾಂಪ್ಲೆಕ್ಸ್ವೊಂದರಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸ್ ತಂಡಕ್ಕೆ ಎಸ್‌ಪಿ ಶ್ರೀನಿವಾಸ್‌ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಮಗೆ ಯಾರಾದರೂ ಬೆಟ್ಟಿಂಗ್ ನಡೆಸುತ್ತಿರುವವರ ಬಗ್ಗೆ ತಿಳಿದಿದ್ದರೆ ನಮಗೆ ಮಾಹಿತಿ ನೀಡಿ. ಹಾಗೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಸಾರ್ವಜನಿಕರಲ್ಲಿ ಎಸ್‌ಪಿ ಮನವಿ ಮಾಡಿದ್ದಾರೆ.