ಸಕಲೇಶಪುರ (ಹಾಸನ): ಕೆಲವು ದಿನಗಳ ಹಿಂದೆ ಸಕಲೇಶಪುರ ನಗರ ಠಾಣಾ ಸರಹದ್ದಿನ ಜಾನೆಕೆರೆ ಗ್ರಾಮದಲ್ಲಿ ಮನೆಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಕಲೇಶಪುರ ಉಪವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಚಿನ್ ಕುಮಾರ್ (31), ನವೀನ್ (23), ಸುನಿಲ್ (25), ಹರೀಶ್ (28) ಬಂಧಿತ ಆರೋಪಿಗಳು. ಜುಲೈ 3 ರಂದು ತಾಲೂಕಿನ ಜಾನೆಕೆರೆ ಗ್ರಾಮದ ಶೀಲ ಎಂಬುವರ ಮನೆಗೆ ಹಾಡಹಗಲೇ ನುಗ್ಗಿದ ಈ ಖದೀಮರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಕಲೇಶಪುರ ಉಪವಿಭಾಗ ಪೊಲೀಸರು, ತನಿಖೆ ನಡೆಸುತ್ತಿದ್ದಾಗ ಒಂದು ವಾರದ ಹಿಂದೆ ಆರೋಪಿಗಳು ಬಾಳ್ಳುಪೇಟೆ ವೃತ್ತದಲ್ಲಿರುವ ಬಗ್ಗೆ ಮಾಹಿತಿ ದೊರಕಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿ ಇಂದು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆ ವೇಳೆ ಈ ಆರೋಪಿಗಳು ಹಾಸನ ಹಾಗೂ ತುಮಕೂರು ಜಿಲ್ಲೆಯಲ್ಲೂ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಬಂಧಿತರಿಂದ ಮೂರು ಪ್ರಕರಣದ ಒಟ್ಟು 5 ಲಕ್ಷದ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಒಂದು ಮೊಬೈಲ್ ಸೇರಿ ಕೃತ್ಯಕ್ಕೆ ಉಪಯೋಗಿಸಿದ ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.