ಹಾಸನ: ನಮ್ಮ ಪಕ್ಷ ಹುಟ್ಟಿರುವುದು ರೈತರ ಪರವಾಗಿ ಹೋರಾಟ ಮಾಡುವುದಕ್ಕೆ, ನನ್ನ 60 ವರ್ಷದ ರಾಜಕೀಯ ಜೀವನದ ಉದ್ದಕ್ಕೂ ಅವರಿಗಾಗಿ ಹೋರಾಟ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನುಗಳ ಪರಿಣಾಮದ ಬಗ್ಗೆ ಚರ್ಚೆ ಮಾಡಬೇಕು. ಆಕಸ್ಮಿಕವಾಗಿ ರಾಜ್ಯಸಭೆಗೆ ಸದಸ್ಯನಾಗಿದ್ದೇನೆ. ರಾಜ್ಯದ ಜನರಿಗೆ ಭೂ ಸುಧಾರಣೆ, ಕೃಷಿ- ಕಾರ್ಮಿಕ ಕಾನೂನು ತಿದ್ದುಪಡಿಗಳ ಬಗ್ಗೆ ತಿಳಿಸಬೇಕಿದೆ ಎಂದು ಹೇಳಿದರು.
ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ನಮ್ಮ ಶಾಸಕರಿದ್ದಾರೆ. ಅವರೆಲ್ಲ ಜನ ವಿರೋಧಿ ಕಾಯ್ದೆಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಬೇಕು. ನಮ್ಮದು ಅಧಿಕೃತ ವಿರೋಧ ಪಕ್ಷ ಇಲ್ಲ, ಆದರೆ, ನಾವು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ರೈತರ ಪಾಲಿನ ಮರಣ ಶಾಸನಗಳಾಗಿರುವ ತಿದ್ದುಪಡಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯದಿದ್ದರೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗವೇ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ದಲ್ಲಾಳಿಗಳು, ಕಳ್ಳರು, ಭೂಗಳ್ಳರು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವ ಕಾಯ್ದೆಗಳನ್ನು ಬಿಜೆಪಿ ಸರ್ಕಾರ ತರುತ್ತಿದೆ. ಇದು ರೈತರನ್ನು ಒಕ್ಕಲೆಬ್ಬಿಸುವ ಹಾಗೂ ರೈತರ ಬದುಕಿಗೆ ಮರಣಶಾಸನ ಬರೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗಳನ್ನು ಘೋಷಿಸುವ ಸಂದರ್ಭಗಳಲ್ಲಿ ಮಧ್ಯವರ್ತಿಗಳ ಮತ್ತು ಖಾಸಗಿ ಕಂಪನಿಗಳನ್ನು ನೇಮಿಸುತ್ತಿವೆ. ಕಾಯ್ದೆಯ ಅನುಷ್ಠಾನದ ಬಳಿಕ ಕ್ರಮೇಣ ಎಪಿಎಂಸಿ ಮಾರುಕಟ್ಟೆಗಳನ್ನು ಮುಚ್ಚುವ ಸ್ಥಿತಿ ಬರಬಹುದು. ಇಷ್ಟೇ ಅಲ್ಲದೆ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 600 ಕೋಟಿ ರೂ. ನಷ್ಟವಾಗಿದ್ದು, ವರ್ತಕರಿಂದ ರೈತರಿಗೆ ಮೋಸವಾದರೆ ರೈತರು ದೂರಲು ಸೂಕ್ತ ವೇದಿಕೆ ಇರುವುದಿಲ್ಲ ಎಂದರು.
ರಾಜ್ಯದಲ್ಲಿ 300ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆಗಳು, ರೈತರು ಮತ್ತು ವರ್ತಕರ ನಡುವಿನ ಕೊಂಡಿಗಳಾಗಿವೆ. ಎಪಿಎಂಸಿ ಒಂದು ಸಾಂಸ್ಥಿಕ ಸಂಸ್ಥೆಯಾಗಿದೆ. ಇಂತಹ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವ ಒಂದು ಲಕ್ಷಕ್ಕೂ ಮೇಲ್ಪಟ್ಟು ಹಮಾಲಿಗಳು ಉದ್ಯೋಗ ಕಳೆದುಕೊಂಡು ತಮ್ಮ ಕುಟುಂಬದೊಂದಿಗೆ ಬೀದಿ ಪಾಲಾಗುವ ಸಾಧ್ಯತೆ ಇದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.