ಹಾಸನ : ಪ್ರತಿ ವರ್ಷದಂತೆ ಈ ವರ್ಷವೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕುಟುಂಬ ಸಮೇತರಾಗಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಶುಕ್ರವಾರ ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಪತ್ನಿ ಚನ್ನಮ್ಮ ಅವರನ್ನು ದೇವಾಯಲಯ ಅಧಿಕಾರಿಗಳು ಬರಮಾಡಿಕೊಂಡರು.
ವ್ಹೀಲ್ ಚೇರ್ನಲ್ಲಿ ಆಗಮಿಸಿ ದೇವರ ದರ್ಶನ ಪಡೆದ ದೊಡ್ಡಗೌಡರು; ವ್ಹೀಲ್ ಚೇರ್ನಲ್ಲಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ ಗೌಡರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದರ್ಬಾರ್ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ಸಿದ್ದೇಶ್ವರ ದೇಗುಲದಲ್ಲಿ ಪೂಜೆ ನೆರವೇರಿಸಿದರು. ಬಳಿಕ ಗೌಡರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವೇಗೌಡರ ಮಗಳು ಅನುಸೂಯ ಮಂಜುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.
ಜಿಲ್ಲಾಡಳಿತ ಕಾರ್ಯಕ್ಕೆ ಹೆಚ್ ಡಿ ದೇವೇಗೌಡರ ಮೆಚ್ಚುಗೆ; ದೇವಿಯ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ತಾಯಿ ದರ್ಶನಕ್ಕೆ ಪ್ರತೀ ವರ್ಷ ಕುಟುಂಬ ಸಮೇತರಾಗಿ ಬರುತ್ತೇವೆ. ದೇವಿ ವರ್ಷಕ್ಕೆ ಒಮ್ಮೆ ದರ್ಶನ ನೀಡುತ್ತಾಳೆ. ದೇವಿಯ ಗರ್ಭಗುಡಿಯೊಳಗೆ ಹಚ್ಚಿಟ್ಟ ದೀಪ ವರ್ಷ ಆದರೂ ಆರುವುದಿಲ್ಲ. ಒಂದು ವರ್ಷ ಆನಂದವಾಗಿ ಉರಿಯುತ್ತೆ. ಉತ್ತರದಲ್ಲಿ ವೈಷ್ಣವಿ ಇದೇ ಸ್ವರೂಪದ ದೇವರು. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ವರ್ಗ ಹಾಸನಾಂಬೆ ಉತ್ಸವವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.
ನಾನು ಹಿಂದೆಂದೂ ಇಷ್ಟೊಂದು ವಿಜೃಂಭಣೆಯ ದೀಪಾಲಂಕಾರ ನೋಡಿರಲಿಲ್ಲ. ವಿದ್ಯುತ್ ದೀಪಾಲಂಕಾರ ಸೊಗಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಎಲ್ಲರ ಸಹಕಾರದಿಂದ ಉತ್ತಮವಾಗಿ ಆಯೋಜನೆ ಮಾಡಿದ್ದಾರೆ. ಅರೋಗ್ಯ ಕೊಡು ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಮುಂದಿನ ಬಾರಿ ಆ ತಾಯಿ ದರ್ಶನಕ್ಕೆ ನಡೆದುಕೊಂಡು ಬರುವಷ್ಟು ಶಕ್ತಿ ನೀಡಲಿ ಎಂದು ಹೇಳಿದರು.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನೋತ್ಸವದ ಮೊದಲ ದಿನವಾದ ಶುಕ್ರವಾರ ಶಕ್ತಿದೇವತೆಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬಂದಿತ್ತು. ಗುರುವಾರ ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ಸರ್ವಾಲಂಕಾರ ಭೂಷಿತೆಯಾದ ಹಾಸನಾಂಬೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ದೇವಿಯ ದರ್ಶನ ಪಡೆಯಲು ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ : ಆರೋಗ್ಯ ಸುಧಾರಣೆಯಾದರೆ ಪ್ರಧಾನಿ ಭೇಟಿ ಮಾಡ್ತೇನಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ