ಹಾಸನ: ದೇವೇಗೌಡರೇ ಲೋಕಸಭಾ ಚುನಾವಣೆಯಲ್ಲಿ ನೀವೇನಾದ್ರೂ ಸೋತ್ತಿದ್ದೀರಾ ಅಂದ್ರೆ ಅದು ನಿಮ್ಮ ಮನೆಯ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಅಂತ ಮೊದಲ ಬಾರಿಗೆ ಮಾಜಿ ಶಾಸಕ ಪುಟ್ಟೇಗೌಡ ಹೇಳಿದರು.
ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳ ಹಾಗೂ ಮೊಮ್ಮಕ್ಕಳ ವಿರುದ್ಧ ಗುಡುಗಿದರು. ಜಿಲ್ಲೆಯ ಜನರು ಜಾತಿ ಮತ, ಪಂಥ ಎನ್ನದೇ ತಮ್ಮನ್ನು ಕೆಂಪುಕೋಟೆಗೇರಿಸಿದ್ರು. ಆದ್ರೆ ಮತ್ತೆ ನಿಮ್ಮನ್ನು ಸಂಸದನಾಗದ ಹಾಗೆ ಮಾಡಿದ್ದು ನಿಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರು, ನಿಮ್ಮ ತಾಳ್ಮೆ ನಿಮ್ಮ ಮಕ್ಕಳಿಗಿಲ್ಲ. ಅವರ ಮಾತನ್ನು ಕೇಳಿ ನಿರ್ಧಾರ ಕೈಗೊಳ್ಳಬೇಡಿ ಎಂದು ಎಚ್.ಡಿ.ದೇವೇಗೌಡರಿಗೆ ಸಲಹೆ ನೀಡಿದರು.
ದೇವೇಗೌಡರೇ ನೀವು ನೋಡಿದ ಹಿಂದಿನ ರಾಜಕೀಯ ಈಗಿಲ್ಲ. ವಿನಾಕಾರಣ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರನ್ನು ಬೆರಳು ಮಾಡಿ ತೋರಿಸಬೇಡಿ. ಕುಟುಂಬ ರಾಜಕಾರಣದಿಂದ ನೀವು ಎಂಪಿ ಆಗಲಿಲ್ಲ, ನಿಮ್ಮ ಕುಡಿಗಳೇ ನಿಮ್ಮನ್ನು ಎಂಪಿ ಆಗೋದಕ್ಕೆ ಬಿಡಲಿಲ್ಲ. ಹಾಗಾಗಿ ಕುಟುಂಬ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಲಾಲೂ ಪ್ರಸಾದ್ ಆದಿಯಾಗಿ ಈವರೆಗೆ ಕುಟುಂಬ ರಾಜಕಾರಣ ಮಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ನಿಮ್ಮ ಪಕ್ಷದ ಜಾತಕವನ್ನು ಗುಬ್ಬಿ ಶ್ರೀನಿವಾಸ, ಜಿ.ಟಿ. ದೇವೇಗೌಡ ಬಿಚ್ಚಿಡುತ್ತಿದ್ದಾರೆ. ಈಗಲಾದರೂ ಮನವರಿಕೆ ಮಾಡಿಕೊಳ್ಳಬೇಕು. ಕುಟುಂಬ ರಾಜಕಾರಣ ಒಳ್ಳೆಯದಲ್ಲ. ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿ ಕುಟುಂಬ ರಾಜಕಾರಣ ಮಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಕೇವಲ 8 ಕೋಟಿಗಾಗಿ ತನಿಖೆ ನಡೆಯುತ್ತಿದೆ. ಆದರೆ ನಮ್ಮ ತಾಲೂಕಿನ ಸಹಕಾರ ಸಂಘಗಳ ಸೊಸೈಟಿಯಲ್ಲಿ 800 ಕೋಟಿ ರೂ. ದರೋಡೆ ಮಾಡಿದ್ದಾರೆ. ಅವರ ವಿರುದ್ದ ಯಾವುದೇ ತನಿಖೆಯಿಲ್ಲ. ಮೈತ್ರಿ ಇದ್ದಾಗ ನಮ್ಮ ನಾಯಕರು ಏನೂ ಮಾತನಾಡಬೇಡಿ ಸುಮ್ಮನಿರಿ ಎಂದಿದ್ದರು. ಹೀಗಾಗಿ ಸುಮ್ಮನಿದ್ದೆ. ಈಗ ಮೈತ್ರಿ ಸರ್ಕಾರ ಬಿದ್ದು ಹೋಗಿದೆ, ನಾವು ಬೇರೆಯಾಗಿದ್ದೇವೆ ಎಂದರು.