ಹಾಸನ: ಎರಡೂ ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಜೆಡಿಎಸ್ ಪಕ್ಷಕ್ಕೆ ಮತ ನೀಡಿದ ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದ ಮತದಾರರಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೃತಜ್ಞತೆ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಬಡವರ ಹೃದಯದಲ್ಲಿದೆ. 1989 ರಲ್ಲಿ ಜಿಲ್ಲೆಯಲ್ಲಿ 7 ರಲ್ಲೂ ಜೆಡಿಎಸ್ ಸೋಲು ಅನುಭವಿಸಿತ್ತು. ನಾಲ್ಕು ವರ್ಷಗಳ ನಂತರ 118 ಸ್ಥಾನಗಳನ್ನು ಜೆಡಿಎಸ್ ಗೆದ್ದಿತ್ತು. ಬಿಜೆಪಿಯ ಕೆಲ ಮುಖಂಡರು, ಚುನಾವಣಾ ಆಯೋಗ ಶಿರಾ ಕ್ಷೇತ್ರಕ್ಕೆ ಹೋಗಿ ನೋಡಿ ಬಂದಿದ್ದರೇ ಏನಾಗಿತ್ತು ಎಂಬುದು ಗೊತ್ತಾಗುತ್ತಿತ್ತು. ನವೆಂಬರ್ 1 ರಿಂದ 3ರವರೆಗೆ ಎಸ್ಪಿ, ಡಿಸಿ, ಚುನಾವಣಾಧಿಕಾರಿಗಳ ಅಧಿಕಾರವನ್ನು ಆರ್ ಎಸ್ ಎಸ್ ಗೆ ನೀಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಚುನಾವಣಾ ಸಂದರ್ಭದಲ್ಲಿಯೇ ಯಾವ ಪೊಲೀಸ್ ಬಂದೋಬಸ್ತ್ ಇರಲಿಲ್ಲ. ಬಿಜೆಪಿಯ ಸ್ವಯಂ ಸೇವಕರು ಮತ್ತು ಮುಖ್ಯಮಂತ್ರಿ ಮಗನೇ ಅಲ್ಲೆ ಕುಳಿತು ಉಸ್ತುವಾರಿ ಮಾಡುತ್ತಿದ್ದರು. ಶಿರಾ ಕ್ಷೇತ್ರದ ಜನರಿಗೆ ನೀರು ಕೊಡಲಿ. ಉಪ ಚುನಾವಣೆ ಹಿನ್ನೆಲೆ ಶಿರಾ ಕ್ಷೇತ್ರಕ್ಕೆ 900 ಕೋಟಿ ಅನುದಾನವನ್ನ ಸರ್ಕಾರ ಕೊಟ್ಟಿತ್ತು. ಇದರ ಜೊತೆಗೆ ಮಹಿಳೆಯರ ಕುಂಕುಮಕ್ಕೆಷ್ಟು, ದೊಡ್ಡ ಮಟ್ಟದಲ್ಲಿ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದರು ಎಂಬುದನ್ನ ವಿಜಯೇಂದ್ರ ಪ್ರಾಮಾಣಿಕವಾಗಿ ಹೇಳಲಿ. ಮೋದಿಯವರು 2023ರ ಚುನಾವಣಾ ಉಸ್ತುವಾರಿಯನ್ನು ವಿಜಯೇಂದ್ರಗೆ ಕೊಡಲಿ. ಚುನಾವಣೆ ನಡೆಸುವಲ್ಲಿ ಸಿಎಂ ಪುತ್ರ ಚಾಣುಕ್ಯನಂತೆ. ಕಟೀಲು, ಈಗಲೇ ಸಿಎಂ ಪುತ್ರನಿಗೆ ಚುನಾವಣಾ ಉಸ್ತುವಾರಿ ವಹಿಸಲಿ ಎಂದು ವ್ಯಂಗ್ಯವಾಡಿದರು.
ಉಪ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡಿದ್ದೇವೆ. ನಾವು ಎಂದಿಗೂ ಎದೆಗುಂದುವುದಿಲ್ಲ ಮುಂದೆಯೂ ಹೋರಾಟ ಮಾಡುತ್ತೇವೆ. ನಾವು ಗೆಲ್ಲುವ ಕುದುರೆಯನ್ನ ನಿಲ್ಲಿಸಬಹುದಿತ್ತು. ಆದರೆ ನಮ್ಮ ಕಾರ್ಯಕರ್ತರಿಗೆ ಟಿಕೆಟ್ ಕೊಡುವುದು ಮುಖ್ಯವಾಗಿತ್ತು ಎಂದರು.