ಹಾಸನ : ಹಾಸನದ ರಿಂಗ್ ರಸ್ತೆ ಹಾಗೂ ಬೆಂಗಳೂರು-ಮಂಗಳೂರು ರಸ್ತೆ ಬದಿಯಲ್ಲಿ ಮದ್ಯದಂಗಡಿಗೆ ಅನುಮತಿ ಕೊಟ್ಟು, ಕೋಟಿ ಕೋಟಿ ಆದಾಯ ಗಳಿಸುತ್ತಿರುವುದು ಬಿಜೆಪಿ ಸರ್ಕಾರದ ಸಾಧನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪರೋಕ್ಷವಾಗಿ ಗುಡುಗಿದ್ದಾರೆ.
ಶಾಂತಿಗ್ರಾಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರ ಇದ್ದಾಗ ಜನರ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದರು. ಆದರೆ, ಇವರು ರಸ್ತೆ ಬದಿಯಲ್ಲಿ ಮದ್ಯ ಮಾರಾಟ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ, ಜನರನ್ನು ಹಾಳು ಮಾಡುತ್ತಿದ್ದಾರೆ.
ಜನರು ಮದ್ಯ ಕುಡಿಯಲಿ ನಾವು ಶೋಕಿ ಮಾಡೋಣ ಅಂತಾ ತಿಳ್ಕೊಂಡಿದ್ದಾರೆ. ಪ್ರತಿ ತಿಂಗಳು ಹಾಸನದಿಂದಲೇ ₹120 ಕೋಟಿ ಮದ್ಯ ಮಾರಾಟವಾಗುತ್ತಿದೆ. ಇಂತಹ ಅಭಿವೃದ್ಧಿ ಕೆಲಸಗಳನ್ನು ಒಮ್ಮೆ ನೋಡಿ ಬನ್ನಿ ಅಂತಾ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೇಳುತ್ತಿದ್ದೇನೆ. ಆದರೆ, ಅವರು ಬರುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಈ ಬಾರಿ ನಾನು ಶಾಂತಿಗ್ರಾಮ ಯುವಕರನ್ನ ಮರೆಯೋದಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೀರಿ ಎಂಬುದನ್ನು ನಾನು ಗಮನಿಸಿದ್ದೇನೆ. ಮಕ್ಕಳಿಗೆ 2 ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡುತ್ತೇನೆ. ಆ ಶಾಲೆ ಹೇಗಿರಬೇಕು ಎಂದರೆ ಖಾಸಗಿ ಶಾಲೆಗೆ ಸೆಡ್ಡು ಹೊಡೆಯಬೇಕು. ಅಂತಹ ಶಾಲೆಯನ್ನು ನಿರ್ಮಾಣ ಮಾಡುತ್ತೇನೆ ಎಂದರು.
ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ನಾನು ಯಾರಿಂದನೂ ಕಲಿಯಬೇಕಿಲ್ಲ. ನನ್ನ ತಂದೆಯವರು ಬಹಳ ಚೆನ್ನಾಗಿ ಹೇಳಿಕೊಟ್ಟಿದ್ದಾರೆ. ಶಾಂತಿಗ್ರಾಮ ಹೋಬಳಿ ಇಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು 520 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇನೆ.
ಇದಲ್ಲದೆ 5 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಮಾಡಿದ್ದು, ಹೆಚ್ ಡಿ ಕುಮಾರಸ್ವಾಮಿ ಆಡಳಿತದಲ್ಲೇ.. ಅವರ ಆಡಳಿದಲ್ಲೇ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಯಾರಿಸಲಾಗಿತ್ತು ಎಂದರು.
ಶಾಂತಿಗ್ರಾಮ, ದುದ್ದ ಹೋಬಳಿ ಕೆರೆ ತುಂಬುವುದಕ್ಕೆ 330 ಕೋಟಿ ರೂ. ಗಳ ಕೆಲಸ ನಡೆಯುತ್ತಿದೆ. ಹಾಸನ ನಗರಕ್ಕೆ ಕುಡಿಯುವ ನೀರು ನೀಡುವಂತೆ ಶಾಂತಿಗ್ರಾಮ ದುದ್ದ ಹೋಬಳಿಯ ಪ್ರತಿ ಮನೆಗೆ ಹೊಳೆಯ ನೀರನ್ನು ನೀಡಲಾಗುತ್ತಿದೆ.
ನಾನು ಆಲೂಗಡ್ಡೆಗೆ ಶೇ.50ರಷ್ಟು ಸಬ್ಸಿಡಿ ಕೊಡಿಸಿದ್ದೆ. ಬಿಜೆಪಿ ಸರಕಾರ ಬಂದ ಮೇಲೆ ಎಲ್ಲ ಸಬ್ಸಿಡಿ ತೆಗೆದಿದ್ದರಿಂದ, ಬಡವರಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದರು.