ಹಾಸನ: ನನಗೆ ನೋಟಿಸ್ ಕೊಟ್ಟವನು ಅವಿವೇಕಿ. ನನಗೆ ಆ ಲೆಟರ್ ಕೊಟ್ಟ ಮೇಲೆ ಒಳ್ಳೆಯದಾಯಿತು. ನಾನು ನನ್ನ ಮಗನ ಎಲೆಕ್ಷನ್‌ಗೆ ಓಡಾಡಲು ಅಧಿಕಾರ ಇರಲಿಲ್ಲ. ನನ್ನನ್ನು ಬಿಜೆಪಿಯ ಕೆಲ ಅಧಿಕಾರದಿಂದ ಮುಕ್ತಿಗೊಳಿಸಿದ ಆ ಅವಿವೇಕಿಗೆ ನಾನು ಧನ್ಯವಾದ ಹೇಳುತ್ತೇನೆ ಎನ್ನುವ ಮೂಲಕ ನೊಂದ ಮನಸ್ಸಿನಿಂದ ವೇದಿಕೆಯ ಮೇಲೆ ಮಾಜಿ ಸಚಿವ ಎ.ಮಂಜು ಭಾವುಕರಾದರು.
ಅರಕಲಗೂಡು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅಭಿಮಾನಿಗಳ ಸಮಾಲೋಚನೆ ಸಭೆಯಲ್ಲಿ ಮಾತನಾಡುತ್ತಾ, ಮಂಥರ್ ಗೌಡಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ ಬಳಿಕ ನನಗೆ ಬಿಜೆಪಿಯಲ್ಲಿ ನೀಡಿದ್ದ ಜವಾಬ್ದಾರಿಯಿಂದ ಮುಕ್ತಿಗೊಳಿಸಿದ್ದಾರೆ. ಈಗ ನನ್ನ ಮೇಲೆ ನಂಬಿಕೆ ಇಲ್ಲ. ಆದರೇ ನಾನು ಮಗನ ಪರ ಎಲೆಕ್ಷನ್ ಮಾಡಲು ಧೈರ್ಯವಿದೆ. ಹಾಗಾಗಿ ಮಗನ ಪರ ಪ್ರಚಾರ ಮಾಡುತ್ತಿದ್ದೇನೆ. ಇರೋನು ಒಬ್ಬ ಮಗ ಅವನನ್ನು ಕಳೆದುಕೊಳ್ಳಲು ಆಗಲ್ಲ, ಹಾಗಾಗಿ ಹೋಗಲೇಬೇಕು. ಮಗನ ಪರ ಎಲೆಕ್ಷನ್ ಮಾಡಿಲ್ಲ ಅನ್ನೋ ಪಾಪಕ್ಕೆ ಏಕೆ ಗುರಿಯಾಗಬೇಕು. ಆ ಪಾಪದ ಗುರಿಯನ್ನ ಲೆಟರ್ ಕೊಟ್ಟು ತಪ್ಪಿಸಿದವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಅವರು ಲೆಟರ್ ಕೊಡದಿದ್ದರೆ ನಾನು ಮಗನ ಪರ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಆದರೆ ಈಗ ಮಗನ ಪರ ಪ್ರಚಾರಕ್ಕೆ ಹೋಗುತ್ತೇನೆ. ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಜವಾಬ್ದಾರಿಯಿಂದ ಮುಕ್ತಿಗೊಳಿಸಿ ನೋಟಿಸ್ ನೀಡಿದ್ದರು. ಈ ಬಗ್ಗೆ ಏಕವಚನದಲ್ಲಿ ಶಿಸ್ತು ಸಮಿತಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ ಎ.ಮಂಜು, ನನಗೆ ನೋಟಿಸ್ ಕೊಡಲು ಅವನಿಗೆ ಅಧಿಕಾರವೇ ಇಲ್ಲ. ನನಗೆ ಅಧ್ಯಕ್ಷರು ನೋಟಿಸ್ ಕೊಡಬೇಕು. ಅದು ಪಕ್ಷ ವಿರೋಧಿ ಚಟುವಟಿಕೆ ಮಾಡಿದಾಗ ಮಾತ್ರ ನೋಟಿಸ್ ಕೊಡಬೇಕು. ನಾನು ಬಿಜೆಪಿ ಅಭ್ಯರ್ಥಿ ಜೊತೆಯಲ್ಲೇ ಇದ್ದು, ಅವರ ಜೊತೆ ಹೋಗಿ ನಾಮಪತ್ರ ಸಲ್ಲಿಸಿದ್ದೆವು. ಸಾಯಂಕಾಲ ಏಕಾಏಕಿ ಎಲ್ಲಾ ಜವಾಬ್ದಾರಿ ವಾಪಸ್ ಪಡೆದಿದ್ದೇವೆ ಅಂತಾರಲ್ಲ ಅವನಿಗೆ ಏನು ಜವಬ್ದಾರಿ ಕೊಟ್ಟಿದ್ದಾರೆ ? ಎಂದು ಹೇಳಲು ಹೇಳಿ. ಪಕ್ಷ ಕಟ್ಟಲು ನಾನು ಮಂಡ್ಯದಲ್ಲಿ ಜೀತ ಮಾಡಿಲ್ವ ಎಂದು ಕಿಡಿಕಾರಿದರು.
ನನಗೆ ಯಾವುದೇ ದೊಡ್ಡ ಹುದ್ದೆ ನೀಡದಿದ್ದರೂ, ಸಂಘಟನೆ ಜವಾಬ್ದಾರಿ ಹೊತ್ತಿದ್ದೆ. ನೋಟಿಸ್ ಕೊಡಲು ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ನನ್ನ ಮನೆಯನ್ನು ಒಡೆದಿದ್ದಾರೆ, ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಹಾಸನ ಶಾಸಕ ಪ್ರೀತಂಗೌಡ ವಿರುದ್ಧವೂ ವಾಗ್ದಾಳಿ ನಡೆಸಿದರು.