ಹಾಸನ: ನೆರೆಯಿಂದ ತತ್ತರಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ವಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪಕ್ಷದ ಕಡೆಯಿಂದ ಆರ್ಥಿಕ ಸಹಾಯ ಮಾಡಿದರು.
ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಹೆಚ್ಡಿಕೆ ಇಂದು ಮಧ್ಯಾಹ್ನ ಹೊಳೆನರಸಿಪುರ ಮತ್ತು ಅರಕಲಗೂಡು ತಾಲೂಕಿಗೆ ಭೇಟಿ ನೀಡಿದರು. ಪ್ರವಾಹದಿಂದ ಮುಳುಗಡೆಯಾದ ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಲ್ಲಿ ಭೇಟಿ ನೀಡಿ ನೆರೆ ಪ್ರದೇಶವನ್ನ ವೀಕ್ಷಣೆ ಮಾಡಿದ್ರು.
ಹೊಳೆನರಸೀಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಹೊಳೆ ಪಕ್ಕದ ಪೌರಕಾರ್ಮಿಕರು ಕೂಡ ನೆರೆ ಹಾವಳಿಗೆ ತುತ್ತಾಗಿದ್ದು, ಅವರನ್ನು ಕೂಡ ಶಿಕ್ಷಕರ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಗೂ ಕೂಡ ಭೇಟಿ ನೀಡಿದ ಕುಮಾರಸ್ವಾಮಿ, ಸಂತ್ರಸ್ತ ಕುಟುಂಬಗಳ ಸಮಸ್ಯೆ ಆಲಿಸಿದರು. ಬಳಿಕ ಶಾದಿಮಹಲ್ ಬಡಾವಣೆಗೆ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿ, ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿಯ ಚೆಕ್ ವಿತರಣೆ ಮಾಡಿದರು.
ಇದೇ ವೇಳೆ ಹಾಸನ ಹಾಲು ಒಕ್ಕೂಟದಿಂದ ನೀಡಲಾಗಿದ್ದ 10 ಸಾವಿರ ಹಾಲಿನ ಪ್ಯಾಕೇಟ್ ಸೇರಿದಂತೆ ನೆರೆ ಸಂತ್ರಸ್ತರಿಗೆ ಬೇಕಾಗುವಂತಹ ದಿನಬಳಕೆಯ ಪದಾರ್ಥಗಳನ್ನು ವಿತರಣೆ ಮಾಡಿದರು. ಈ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಬಂಡೆಪ್ಪ ಕಾಶಂಪುರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.