ಬೇಲೂರು(ಹಾಸನ): ತಾಲ್ಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಕೆ. ಸುರೇಶ್ ಅವರ ಇಬ್ಬರು ಬಲಗೈ ಭಂಟರ ವಿರುದ್ಧ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಕೆ. ಸುರೇಶ್ ಬೆಂಬಲಿಗರಾದ ಬಿರಡಹಳ್ಳಿ ಮಧು ಮತ್ತು ಭರತ್ ವಿರುದ್ಧ ಅರೇಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ವಾಣಿ ಎಂಬುವರು ಪ್ರಕರಣ ದಾಖಲು ಮಾಡಿದ್ದಾರೆ.
ಹೆಚ್. ಕೆ. ಸುರೇಶ್ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ್ ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಮಧ್ಯಾಹ್ನ ಠಾಣೆಗೆ ಬಂದು ಏಕವಚನದಲ್ಲೇ ಸಿಬ್ಬಂದಿಯನ್ನು ಮಾತನಾಡಿಸಿದ್ದಾರೆ. ಅಲ್ಲದೇ, ಅವರ ಜೊತೆಗಿದ್ದ ರೌಡಿಶೀಟರ್‌ಗಳಾದ ಬಿರಡಹಳ್ಳಿ ಮಧು ಮತ್ತು ಭರತ್ ಅವರು ಸೆ. 19ರಂದು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದ ಕುರಿತು ಎಎಸ್ಐ ಚಲುವರಾಜು ಅವರೊಂದಿಗೆ ಏರುಧನಿಯಲ್ಲಿ ಮಾತನಾಡಿದ್ದರು.
ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನನ್ನ ಮೇಲೆಯೇ ನಿಮ್ಮ ಪಿಎಸ್ಐ ಮಹೇಶ್ ಪ್ರಕರಣ ದಾಖಲು ಮಾಡಿದ್ದಾರೆ. ಅವರಿಗೆ ನನ್ನ ಬಗ್ಗೆ ತಿಳಿದಿಲ್ಲವೇ ಎಂದು ಪೊಲೀಸರನ್ನೆ ಪ್ರಶ್ನೆ ಮಾಡಿ ಬೆದರಿಕೆ ಹಾಕಿದ್ದರು. ಅಲ್ಲದೇ ಮಹಿಳಾ ಕಾನ್‌ಸ್ಟೆಬಲ್ ವಾಣಿ ಮೇಲೆ ಕೂಗಾಡಿ ನಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲು ಪಿಎಸ್ಐಗೆ ಸಹಾಯ ಮಾಡ್ಡಿದ್ದೀಯಾ. ನಿನ್ನನ್ನು ನೋಡಿಕೋಳ್ಳುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾದಾಗ ಠಾಣಾ ಸಿಬ್ಬಂದಿ ತಡೆದಿದ್ದರು.
ವಾಣಿ ಅವರ ದೂರಿನ ಮೇರೆಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧಿಸಿದಂತೆ ಬೇಲೂರು ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ್ ತನಿಖೆ ನಡೆಸುತ್ತಿದ್ದಾರೆ.