ಹಾಸನ: ಅರಕಲಗೂಡು ತಾಲೂಕಿನ ರಾಮನಾಥ-ಮೈಸೂರು ಮಾರ್ಗವು ಹದಗೆಟ್ಟಿದ್ದು, ಜಿಲ್ಲಾಡಳಿತ ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ವಿವಿಧ ರೈತ ಸಂಘಟನೆಗಳು, ಸಾರ್ವಜನಿಕರು ರಸ್ತೆ ತಡೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.
ಬಸವಾಪಟ್ಟಣದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ರಸ್ತೆಯಲ್ಲಿಯೇ ಅಡುಗೆ ತಯಾರಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದರು. ಹಿಂದಿನ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿದರು.
ಸತತವಾಗಿ ಸುರಿದ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಈ ಬಗ್ಗೆ ಯಾವ ಜನಪ್ರತಿನಿಧಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ವಾಹನಗಳ ಸಂಚಾರ ದುಸ್ತರವಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು.
ಸುಮಾರು ಮೂರುಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬರಬೇಕೆಂದು ಪಟ್ಟುಹಿಡಿದು ನಂತರ ತಹಶೀಲ್ದಾರ್ ಪಾರ್ಥ ಸಾರಥಿಯವರಿಗೆ ಮನವಿ ಸಲ್ಲಿಸಲಾಯಿತು.