ಹಾಸನ: ನಿರಂತರ ಮಳೆಯಿಂದ ಕಳೆದ ಎರಡು ವರ್ಷಗಳ ಹಿಂದೆ ಹಾಸನ-ಕೊಡಗು ಗಡಿಭಾಗದಲ್ಲಿ ಗುಡ್ಡ ಕುಸಿತ ಪ್ರಕರಣ ಮಾಸುವ ಮುನ್ನವೇ ಈಗ ಈ ಭಾಗದಲ್ಲಿ ಕುಟುಂಬವೊಂದು ಜೀವ ಭಯದಲ್ಲಿ ಬದುಕುತ್ತಿದೆ.
2018ರಲ್ಲಿ ಜಿಲ್ಲೆಯ ಗಡಿಭಾದ ಮಾಗೇರಿ-ಹಿಜ್ಜನಹಳ್ಳಿಯ ರಸ್ತೆ ಗುಡ್ಡ ಕುಸಿತವಾಗಿ ಕೊಡಗು ಮತ್ತು ಹಾಸನ ಭಾಗದ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ರಸ್ತೆಯ ಎರಡೂ ಭಾಗದ ಭೂಮಿ ಬೃಹತ್ ಪ್ರಮಾಣದಲ್ಲಿ ಇಬ್ಬಾಗವಾಗಿದ್ದರಿಂದ ಮಲೆನಾಡು ಭಾಗದ ನೂರಾರು ರೈತರು ತೊಂದರೆ ಅನುಭವಿಸಿದ್ದರು. ಈ ಘಟನೆ ಮರೆಯುವ ಮುನ್ನವೇ ಇಲ್ಲಿನ ದಯಾನಂದ್ ಎಂಬವರ ಕುಟುಂಬ ಆತಂಕದಲ್ಲಿದೆ.
3-4 ಎಕರೆ ಕಾಫಿ ತೋಟ ಹೊಂದಿರುವ ಇವರದ್ದು ಸಣ್ಣ ಹಿಡುವಳಿದಾರರ ಕುಟುಂಬವಾಗಿದೆ. ಇವರ ಮನೆ ಇಳಿಜಾರು ಪ್ರದೇಶದಲ್ಲಿದ್ದು, ಕಾಫಿತೋಟ ಗುಡ್ಡದಲ್ಲಿದೆ. ಇತ್ತೀಚೆಗೆ ಸುರಿದ ಮಳೆಗೆ ಈಗಾಗಲೇ ಮನೆಯ ಮುಂಭಾಗದ ಅಂಗಳ ಕುಸಿದಿದೆ. ಮನೆಯ ಹಿಂದೆ ಮಣ್ಣಿನಲ್ಲಿ ನೀರಿನ ಬುಗ್ಗೆ ಎದ್ದಿದೆ. ಕಳೆದ ಬಾರಿ ಗುಡ್ಡ ಕುಸಿತದಿಂದ ಮನೆ ಕೊಂಚ ಬಿರುಕು ಬಿಟ್ಟಿತ್ತು. ಈಗ ಕುಸಿಯುವ ಹಂತ ತಲುಪಿದೆ. ಚಿತ್ತಾ ಮಳೆಯ ಆರ್ಭಟ ಇದಕ್ಕೆಲ್ಲ ಕಾರಣವಾಗುತ್ತಿದೆ. ಕೊಡಗು ಜಿಲ್ಲೆಯ ಭಾಗಮಂಡಲದ ಗುಡ್ಡಕ್ಕೂ ಈ ಮನೆಗೂ ಕೇವಲ 30 ಕಿ.ಮೀ ಅಂತರವಷ್ಟೇ ಇದೆ.
ಈ ಕುಟುಂಬ ತಮ್ಮ ಮನೆ ತೊರೆದು ಮಾಗೇರಿ ಗ್ರಾಮದಲ್ಲಿನ ಸರ್ಕಾರಿ ಗೋಮಾಳದಲ್ಲಿ ಒಂದು ಸಣ್ಣ ಶೆಡ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಪ್ರಾಣ ರಕ್ಷಣೆಗಾಗಿ ಮನೆ ತೊರೆದು ನೆಲೆ ಕಂಡುಕೊಂಡಿದ್ದ ಇವರಿಗೆ ಸರ್ಕಾರದ ಅಧಿಕಾರಿಗಳೇ ಮುಳ್ಳಾಗಿದ್ದಾರೆ. ಏಕೆಂದರೆ ಇವರು ತಾತ್ಕಾಲಿಕ ವಾಸಕ್ಕೆ ಕಟ್ಟಿಕೊಂಡಿರುವ ಶೆಡ್ ಅನ್ನು ಕೆಡವಲು ಮುಂದಾಗಿದ್ದಾರೆ ಎಂಬುದು ಇವರ ಆರೋಪ.
ಸದ್ಯ ಗಂಗಮ್ಮ ಕುಟುಂಬ ಕಟ್ಟಿಕೊಂಡಿರುವ ಮನೆ ಸರ್ಕಾರಿ ಶಾಲೆಯ ಜಾಗ ಎನ್ನುವ ಕಾರಣ ಇಟ್ಟುಕೊಂಡು ಕೆಲ ಗ್ರಾಮಸ್ಥರು ಇವರಿಗೆ ತೊಂದರೆ ನೀಡುವ ಉದ್ದೇಶದಿಂದ ಸರ್ಕಾರದ ಕಂದಾಯ ಇಲಾಖೆಗೆ ಪತ್ರದ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ತೊಂದರೆಯಲ್ಲಿರುವ ಕುಟುಂಬವನ್ನು ನೋಡಿ ಅದೇ ಗ್ರಾಮದ ಕೆಲವರು ದಯಾನಂದ್ ಕುಟುಂಬದ ಬೆನ್ನಿಗೆ ನಿಂತಿದ್ದಾರೆ.