ಸಕಲೇಶಪುರ: ತಾಲೂಕಿನಲ್ಲಿ ಭಾರೀ ಗಾಳಿ ಮಳೆ ಮುಂದುವರೆದಿದ್ದು, ಹಲವೆಡೆ ರಸ್ತೆಗಳ ಮೇಲೆ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆಗಳು ನಡೆದಿವೆ.
ರಾಷ್ಟ್ರೀಯ ಹೆದ್ದಾರಿ 75 ಬಾಳ್ಳುಪೇಟೆ ಸಮೀಪ ಬೃಹತ್ ಗಾತ್ರದ ಮರವೊಂದು ಬುಧವಾರ ಇಂದು ಬೆಳಗ್ಗೆ ರಸ್ತೆಯ ಮೇಲೆ ಬಿದ್ದಿದ್ದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ನಂತರ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಹಾನುಬಾಳ್ ವೆಂಕಟಹಳ್ಳಿ ಸಮೀಪ ಮಂಗಳವಾರ ಸಂಜೆಯೂ ಮರವೊಂದು ಬಿದ್ದಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ನಂತರ ಗ್ರಾಮಸ್ಥರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು. ಪಟ್ಟಣದ ಅರೇಹಳ್ಳಿ ಬೀದಿಯ ಮನೆಯ ಮೇಲೆ ಹಾಕಿದ್ದ ಶೀಟ್ವೊಂದು ಹಾರಿ ಹೋಗಿದ್ದರಿಂದ ಮನೆಯವರು ತೊಂದರೆ ಅನುಭವಿಸಬೇಕಾಯಿತು.
ಕೆಸಗನಹಳ್ಳಿ ಗ್ರಾಮದ ಪಾಪು ಎಂಬುವರ ಮನೆಯೊಂದರ ಮೇಲೆ ತೆಂಗಿನಮರ ಬಿದ್ದಿದ್ದರಿಂದ ಮನೆಯ ಛಾವಣಿ ಜಖಂ ಆಗಿದೆ. ಹೆತ್ತೂರು ಗ್ರಾಮದಲ್ಲೂ ಸಹ ಮನೆಯೊಂದರ ಶೀಟ್ ಹಾಳಾಗಿದ್ದು, ತಾಲೂಕಿನ ಹಲವಡೆ ಮನೆಗಳಿಗೆ ಭಾರೀ ಪ್ರಮಾಣದ ಗಾಳಿಯಿಂದ ಹಾನಿ ಸಂಭವಿಸಿದೆ. ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಪಟ್ಟಣದ ಹೇಮಾವತಿ ನದಿ ನೀರಿನ ಮಟ್ಟ ಏರುತ್ತಿದ್ದು, ಸುಮಾರು 7 ಅಡಿಯಷ್ಟು ನೀರು ನದಿಗೆ ಹರಿದುಬಂದಿದೆ.
ಒಟ್ಟಾರೆಯಾಗಿ ಮಳೆಗಿಂತ ಗಾಳಿಯ ಆರ್ಭಟ ಹೆಚ್ಚಾಗಿದ್ದರಿಂದ ಹಲವೆಡೆ ಅನಾಹುತಗಳು ಸಂಭವಿಸಿವೆ.