ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ನಿಂಬೆಹಣ್ಣಿಗೂ ಅವಿನಾಭಾವ ಸಂಬಂಧವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅವರ ಬಳಿ ನಿಂಬೆಹಣ್ಣು ಇದ್ದೇ ಇರುತ್ತದೆ. ನಿನ್ನೆ ನಡೆದ ಸಮಾರಂಭವೊಂದರಲ್ಲೂ ಒಂದಲ್ಲ ಹಲವು ನಿಂಬೆ ಹಣ್ಣುಗಳನ್ನ ಕಾರ್ಯಕರ್ತರತ್ತ ಉರುಳಿಸಿರುವ ವಿಭಿನ್ನ ಘಟನೆ ನಡೆದಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ವೇದಿಕೆ ಮೇಲಿಂದ ನಿಂಬೆ ಹಣ್ಣು ಉರುಳಿಸಿದ್ದಾರೆ. ಇವುಗಳನ್ನ ಅಭಿಮಾನಿಗಳು ಸಂಭ್ರಮದಿಂದಲೇ ಸ್ವೀಕರಿಸಿದ್ದಾರೆ.
ಇದನ್ನೂ ಓದಿರಿ: ಪೆಟ್ರೋಲ್ ಪಂಪ್ನಲ್ಲಿ ಸೀಮೆ ಎಣ್ಣೆ ವಾಸನೆ: ಕಂಗಾಲಾದ ಗ್ರಾಹಕರು
ಈ ವೇಳೆ ಮಾತನಾಡಿರುವ ಅವರು, ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯನ್ನು ನಂಬಿ ಕೆಟ್ಟವರಿಲ್ಲ. ಹಿಂದೆ ದೇವೇಗೌಡರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೈ ತಪ್ಪಿದಾಗ ಬೆಳಗ್ಗಿನ ಜಾವ ಮೂರು ಗಂಟೆಯಲ್ಲಿ ರಂಗನಾಥ ಸ್ವಾಮಿ ಕನಸಲ್ಲಿ ಬಂದು ಅರ್ಜಿ ಹಾಕು ಅಂತ ಹೇಳಿದರು. ರಂಗನಾಥ ಸ್ವಾಮಿ ಆಜ್ಞೆ ನಂತರವೇ ದೇವೇಗೌಡರು ಚುನಾವಣೆಗೆ ನಿಂತು ಗೆದ್ದಿದ್ದು, ಪ್ರತಿ ಚುನಾವಣೆಯಲ್ಲೂ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಅರ್ಜಿಯನ್ನು ಪೂಜಿಸಿ ನಂತರವೇ ಚುನಾವಣೆಗೆ ಹೋಗುವುದು ಪದ್ಧತಿ. ಒಮ್ಮೆ ರಂಗನಾಥ ಸ್ವಾಮಿಗೆ ಅರ್ಜಿ ಇಟ್ಟು ಪೂಜಿಸದೇ ಹೋದಾಗ ಆ ಸಲ ನಾವು ಸೋತೆವು ಎಂದು ರೇವಣ್ಣ ರಹಸ್ಯವೊಂದನ್ನು ಸಭೆಯಲ್ಲಿ ಬಿಚ್ಚಿಟ್ಟರು.
ಹಾಸನ ಜಿಲ್ಲೆ ಅರಸೀಕೆರೆ ನಾಗರಹಳ್ಳಿ ತಿರುಮಲ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಅರಸೀಕೆ ಶಾಸಕ ಶಿವಲಿಂಗೇಗೌಡ ಸೇರಿ ಹಲವರು ಭಾಗಿಯಾಗಿದ್ದರು.