ಹಾಸನ: ಕೋವಿಡ್-19 ನಿಯಂತ್ರಣಾ ಕ್ರಮವಾಗಿ ಏ. 20ರ ನಂತರ ಮನೆಯಿಂದ ಹೊರ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಈ ಬಗ್ಗೆ ಸರ್ಕಾರ ಆದೇಶ ಹೊಡಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಆದರೆ ಸಾರ್ವಜನಿಕರ ಓಡಾಟ ಪ್ರಾರಂಭವಾದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಅಥವಾ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡೇ ಮನೆಯಿಂದ ಆಚೆ ಬರಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಪ್ರತಿ ಮನೆಗೂ ಒಂದರಂತೆ ಮಾಸ್ಕ್ ವಿತರಣೆ ಮಾಡಬೇಕು. ಅದಕ್ಕಾಗಿ ವಿವಿಧ ಸಂಘ ಸಂಸ್ಥೆಗಳ ನೆರವು ಪಡೆಯಿರಿ. ಸಿ.ಎಸ್.ಆರ್ ನಿಧಿಗಳನ್ನು ಬಳಸಿ ಮಾಸ್ಕ್ಗಳನ್ನು ತಯಾರಿಸಿ ಮನೆ ಮನೆಗಳಿಗೆ ಹಂಚಿ ಎಂದು ತಿಳಿಸಿದರು. ಸದ್ಯಕ್ಕೆ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯ ಪಿಪಿಇ ಕಿಟ್‍ಗಳ ಅವಶ್ಯಕತೆ ಇಲ್ಲ. ಕೇವಲ ಕೋವಿಡ್-19 ಶಂಕಿತರನ್ನು ತಪಾಸಣೆ ಮಾಡುವ ವೈದ್ಯರು ಅಥವಾ ಸಿಬ್ಬಂದಿ ಮಾತ್ರ ಧರಿಸಿದರೆ ಸಾಕು. ಅಂತೆಯೇ ಎನ್-95 ಮಾಸ್ಕ್ಗಳನ್ನೂ ಸಹ ಎಲ್ಲರೂ ಬಳಸುವ ಅಗತ್ಯ ಇಲ್ಲ ಎಂದು ತಿಳಿಸಿದರು. ಇನ್ನು ತಬ್ಲಿಘಿ ಜಮಾತ್ನಲ್ಲಿ ಭಾಗವಹಿಸಿ ಬಂದವರನ್ನು ಸಹ ತಪಾಸಣೆಗೆ ಒಳಪಡಿಸಬೇಕು. ಈ ಬಗ್ಗೆ ಹೆಚ್ಚು ನಿಗಾ ವಹಿಸುವ ಅವಶ್ಯಕತೆ ಇದೆ. ಅಲ್ಲದೆ ಬೇರೆ ಬೇರೆ ಮೂಲಗಳಿಂದ ಹೊರ ರಾಜ್ಯ ಸಂಚರಿಸಿ ಬಂದವರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಿ ಎಂದು ತಿಳಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ, ಬೇರೆ ಜಿಲ್ಲೆಯಲ್ಲಿ ಪಡಿತರ ಪಟ್ಟಿಯಲ್ಲಿ ಹೆಸರಿರುವವರಿಗೂ ಸಹ ಒಟಿಪಿ ಪಡೆದು ಪಡಿತರ ವಿತರಿಸುವ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯಲ್ಲಿ ಪಡಿತರ ವಿರಣೆಯ ವಿಷಯವಾಗಿ ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಸರಿಪಡಿಸಲಾಗುವುದು. ಹೊಸ ಕಾರ್ಡ್‍ಗೆ ಅರ್ಜಿ ಸಲ್ಲಿಸಿ, ಇನ್ನೂ ಮಂಜೂರಾತಿ ಆಗದವರಿಗೂ ಪಡಿತರ ವಿತರಿಸಲಾಗುವುದು. ಆದರೆ ರದ್ದುಗೊಳಿಸಲಾಗಿರುವ ಪಡಿತರ ಚೀಟಿದಾರರಿಗೆ ನೀಡಲಾಗುವುದಿಲ್ಲ ಎಂದರು.
ಶಾಸಕ ಪ್ರೀತಂ ಜೆ. ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ನ್ಯಾಯಬೆಲೆ ಅಂಗಡಿಯವರೇ ಹಳ್ಳಿಗಳಿಗೆ ಹೋಗಿ ಕಾರ್ಡ್‍ದಾರರಿಗೆ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಮಾಡುವಂತೆ ಕೋರಿದರು. ಈ ಬಗ್ಗೆ ತಕ್ಷಣ ಕ್ರಮ ವಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಇನ್ನು ಬ್ಯಾಂಕ್‍ಗಳಿಂದ ಪಡೆದ ಸಾಲದ ಕಂತು ಪಾವತಿಯನ್ನು 3 ತಿಂಗಳ ಕಾಲ ಮುಂದೂಡಿದ್ದು, ಇದಕ್ಕೆ ಯಾವುದೇ ಹೆಚ್ಚುವರಿ ಬಡ್ಡಿ ವಿಧಿಸುವುದಿಲ್ಲ ಎಂದರು. ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲೆಯಲ್ಲಿ ಕೋವಿಡ್-19 ಸ್ಥಿತಿಗತಿಗಳ ಬಗ್ಗೆ ವಿತರಿಸಿ ಜಲ್ಲೆಗೆ ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಬರುತ್ತಿರುವವರ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಂಡು ಬರುವ ಸಾಧ್ಯತೆ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತುರ್ತು ಆರೋಗ್ಯ ಪರಿಸ್ಥಿತಿಯನ್ನು ಹೊರತುಪಡಿಸಿ ಬೇರೆ ಬೇರೆ ಕಾರಣಗಳನ್ನು ಹೇಳಿಕೊಂಡು ಬರುವವರನ್ನು ಯಾವುದೇ ಕಾರಣಕ್ಕೂ ಜಿಲ್ಲೆಯ ಒಳಗಡೆ ಬಿಡಬೇಡಿ ಎಂದು ನಿರ್ದೇಶನ ನೀಡಿದರು. ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 1 ಕೋಟಿ ಹಾಗೂ ಇತರೆ ತಾಲೂಕುಗಳಿಗೆ 50 ಲಕ್ಷ ರೂಪಾಯಿಗಳನ್ನು ಎಸ್.ಡಿ.ಆರ್.ಎಫ್ ನಿಧಿಯಿಂದ ಬಿಡುಗಡೆ ಮಾಡಲಾಗುವುದು. ತುರ್ತು ಕುಡಿಯುವ ನೀರಿನ ಪೂರೈಕೆಯನ್ನು ಹೊರತುಪಡಿಸಿ ಬೇರೆ ಯಾವ ಮುಂದುವರಿದ ಕಾಮಗಾರಿಗಳ ವೆಚ್ಚಕ್ಕೆ ಇದನ್ನು ಬಳಸಬಾರದು. ನಿಯಮ ಉಲ್ಲಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಸಚಿವರು ಎಚ್ಚರಿಕೆ ನೀಡಿದರು.
ಮೇ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ 10 ಕೆಜಿ ಅಕ್ಕಿ ಮತ್ತು 2 ಕೆಜಿ ಬೆಳೆ ನೀಡಲಾಗುತ್ತದೆ. ಆನ್ಲೈನ್ನಲ್ಲಿ ವ್ಯಾಪಾರ ವಹಿವಾಟು ಮಾಡುವ ಮೂಲಕ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗುವುದು. ಆ ಮೂಲಕ ಸಾರ್ವಜನಿಕರು ರಸ್ತೆಗೆ ಬರುವುದನ್ನು ನಿಯಂತ್ರಿಸಲಾಗುವುದು ಎಂದು ತಿಳಿಸಿದರು. ಸಾಮಾನ್ಯ ಜ್ವರ, ಕೆಮ್ಮು ಇದ್ದವರೆಲ್ಲ ಕೊರೊನಾ ಸೋಂಕಿತರೆಂದು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆಗಾಗಿ ಆ ಲಕ್ಷಣಗಳು ಕಂಡು ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ತಪಾಸಣಾ ಪ್ರಯೋಗಾಲಯಗಳನ್ನು 50ಕ್ಕೆ ಏರಿಸಲಾಗಿದೆ ಎಂದು ಹೇಳಿದರು.
ಸರಕು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಹಾಸನ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇಲ್ಲದ್ದರಿಂದ ಏ. 20ರ ನಂತರದಲ್ಲಿ ಕೃಷಿ, ಕಾಫಿ ತೋಟದ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಹೋಟೆಲ್, ಸಾರ್ವಜನಿಕ ಸಾರಿಗೆ, ಚಿತ್ರಮಂದಿರ, ಸೂಪರ್ ಮಾರ್ಕೆಟ್ಗಳಂತಹ ಜನ ಸೇರುವ ಸ್ಥಳಗಳನ್ನು ತೆಗೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.