ಹಾಸನ/ಅರಸೀಕೆರೆ: ಕಾನೂನು ಉಲ್ಲಂಘನೆ ಮಾಡಿ ಕುಡಿಯುವ ನೀರಿನ ಸಾಮಗ್ರಿ ಮತ್ತು ಕಟ್ಟಡವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷನನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಮಹತ್ವದ ಆದೇಶವನ್ನು ಪೌರಾಡಳಿತ ಇಲಾಖೆ ಹೊರಡಿಸಿದೆ.
ಅರಸೀಕೆರೆ ಕುಡಿಯುವ ನೀರಿನ ಕೆಲವು ಸಾಮಗ್ರಿಗಳನ್ನು ಮತ್ತು ಕಟ್ಟಡ ತೆರವುಗೊಳಿಸುವಲ್ಲಿ ಇಲಾಖೆಯ ಅನುಮತಿ ಪಡೆಯದೆ ಮತ್ತು ಕಾನೂನನ್ನು ಪಾಲಿಸದೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ, ಪೌರಾಡಳಿತ ಮತ್ತು ನೀರು ಸರಬರಾಜು ಇಲಾಖೆಗೆ ಲಕ್ಷಾಂತರ ಮೌಲ್ಯದ ನಷ್ಟವಾದ ಹಿನ್ನೆಲೆಯಲ್ಲಿ, ಪೌರಾಡಳಿತ ಇಲಾಖೆ ಪ್ರಾದೇಶಿಕ ಆಯುಕ್ತ ಡಾ ಬಿ ಸಿ ಪ್ರಕಾಶ್, ಅರಸೀಕೆರೆ ನಗರಸಭೆ ಅಧ್ಯಕ್ಷ ಸಿ ಗಿರೀಶ್ ಅವರ ಸ್ಥಾನ ಮತ್ತು ನಗರಸಭೆಯ ಸದಸ್ಯ ಸ್ಥಾನವನ್ನು ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಪ್ರಕರಣ ಇದಾಗಿದೆ ಎನ್ನಲಾಗಿದ್ದು, ಬರದ ನಾಡು ಎಂದು ಕರೆಯುವ ಅರಸೀಕೆರೆಗೆ ನೀರು ಒದಗಿಸುವ ಹಿನ್ನೆಲೆಯಲ್ಲಿ ಬ್ರಿಟಿಷರ ಕಾಲದಲ್ಲಿ ಪಂಪ್ ಹೌಸ್ ಒಂದನ್ನು ನಿರ್ಮಾಣ ಮಾಡಲಾಗಿತ್ತು. ಇದೇ ಜಾಗದಲ್ಲಿ ಒಂದು ಖಾಸಗಿ ವಿದ್ಯಾಸಂಸ್ಥೆಗೂ ಜಾಗ ನೀಡಲಾಗಿತ್ತು. ಆದರೆ, ಈ ಜಾಗವನ್ನು ಜು. 2, 2022ರಂದು ತೆರವುಗೊಳಿಸಿ ಒಂದು ಸಮಾಜಕ್ಕೆ ಸಮುದಾಯ ಭವನ ಕಟ್ಟಿಕೊಳ್ಳಲು ಯೋಜನೆ ರೂಪಿಸಿ, ಸರ್ಕಾರಿ ಸ್ವಾಮ್ಯದ ನಿವೇಶನ ಹಾಗೂ ಕಟ್ಟಡವನ್ನು ಕಾನೂನು ಉಲ್ಲಂಘನೆ ಮಾಡಿ, ಸರ್ಕಾರದ ಗಮನಕ್ಕೆ ತರದೇ ಸಾರ್ವಜನಿಕರ ವಿರೋಧದ ನಡುವೆ, ಪೊಲೀಸರ ಸಹಾಯ ಪಡೆದು, ಜೆಸಿಬಿ ಮೂಲಕ ತೆರವುಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಶಿವಲಿಂಗೇಗೌಡ ಹಾಗೂ ಮಾಜಿ ನಗರಸಭೆಯ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಮಿಉಲ್ಲಾ ನೇತೃತ್ವದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಮತ್ತು ಪೌರಾಡಳಿತ ಇಲಾಖೆಗೆ ಹಾಗೂ ಪ್ರಾದೇಶಿಕ ಆಯುಕ್ತರಿಗೆ ಪ್ರತ್ಯೇಕ ದೂರು ದಾಖಲು ಮಾಡಿದ್ದರು. ಕೋರ್ಟ್ ಆದೇಶ ಹೊರಬೀಳುವ ಮುನ್ನವೇ ಪ್ರಾದೇಶಿಕ ಆಯುಕ್ತರೇ ಪ್ರಕರಣದ ಸಂಬಂಧ ಶೀಘ್ರ ಕಾನೂನು ಕ್ರಮ ಕೈಗೊಂಡು ಪೌರಾಡಳಿತ ಅಧಿನಿಯಮ 1964 ಕಲಂ 42(10) ಅನ್ವಯ ನಗರಸಭೆ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ಸ್ಥಾನದಿಂದ ಸಿ ಗಿರೀಶ್ ಅವರನ್ನು ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕೆಲಸದಿಂದ ವಜಾ.. ರೈಲ್ವೆ ಸ್ವಚ್ಛತಾ ಕಾರ್ಮಿಕರ ಅರೆಬೆತ್ತಲೆ ಪ್ರತಿಭಟನೆ