ಸಕಲೇಶಪುರ(ಹಾಸನ): 5 ಜನರ ಸಾವಿಗೆ ಕಾರಣವಾಗಿದ್ದ ಮೌಂಟೈನ್ ಎಂಬ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತಾಲೂಕಿನ ಹಳೆಕೆರೆ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಜನರಿಗೆ ಉಪಟಳ ನೀಡುತ್ತಿದ್ದ ಮೌಂಟೈನ್ ಕಾಡಾನೆಯನ್ನು ಮುಂಜಾನೆ 6 ಗಂಟೆಯ ವೇಳೆಗೆ ಗುರುತಿಸಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 8 ಗಂಟೆ ಹೊತ್ತಿಗೆ ಇಲಾಖೆಯ ಶಾರ್ಪ್ ಷೂಟರ್ಗಳಾದ ವೆಂಕಟೇಶ್ ಹಾಗೂ ಮುಜೀಬ್ ಕಾಡಾನೆಗೆ ನಿಖರವಾಗಿ ಅರವಳಿಕೆ ಮದ್ದು ಹೊಡೆಯುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಅಭಿಮನ್ಯು ಸಾಕಾನೆ ನೇತೃತ್ವದಲ್ಲಿ ಅರ್ಜುನ, ಮಹೇಂದ್ರ, ಮಹಾರಾಷ್ಟ್ರ ಭೀಮ್, ಗಣೇಶ ಎಂಬ ಒಟ್ಟು 5 ಸಾಕಾನೆಗಳು ಹಾಗೂ ಸುಮಾರು 20ಕ್ಕೂ ಹೆಚ್ಚು ಮಾವುತರು ಮತ್ತು ಕಾವಾಡಿಗರು, ಸುಮಾರು 120ಕ್ಕೂ ಹೆಚ್ಚು ಆರ್.ಆರ್.ಟಿ ಮತ್ತು ಇತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗಿಯಾಗಿದ್ದರು. ಜಿಲ್ಲಾ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ್, ಎಸಿಎಫ್ ಲಿಂಗರಾಜು, ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಳೆದ 2 ವಾರಗಳ ಹಿಂದಷ್ಟೇ ಹಳೇಕೆರೆ ಸಮೀಪದ ಕಿರುಹುಣಸೆ ಗ್ರಾಮದ ಕಾಫಿ ಬೆಳೆಗಾರರೋರ್ವರನ್ನು ಕಾಡಾನೆ ಬಲಿ ತೆಗೆದುಕೊಂಡಿದ್ದರಿಂದ ಕಾಡಾನೆ ಸ್ಥಳಾಂತರ ಮಾಡುವ ಕಾರ್ಯಾಚರಣೆ ಪುನರಾರಂಭ ಮಾಡುವಂತೆ ವ್ಯಾಪಕ ಒತ್ತಾಯ ಇತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ನೀಡಲು ವಿಳಂಬವಾದ ಕಾರಣ ಜೂನ್ 6 ರಂದು ಆರಂಭವಾಗಬೇಕಾಗಿದ್ದ ಕಾರ್ಯಾಚರಣೆ 4 ದಿನ ವಿಳಂಬವಾಗಿತ್ತು.
ಈಗ ಸೆರೆ ಹಿಡಿದಿರುವ ಕಾಡಾನೆ ಮೌಂಟೈನ್ ಸಕಲೇಶಪುರ ಆಲೂರು ತಾಲೂಕುಗಳಲ್ಲಿ ವ್ಯಾಪಕ ದಾಂಧಲೆ ನಡೆಸುತ್ತಿತ್ತು ಎಂದು ಹೇಳಲಾಗಿದ್ದು, ಜೊತೆಗೆ ಸುಮಾರು 5 ಜನರನ್ನು ಇದೇ ಕಾಡಾನೆ ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಇದೀಗ 2 ಪುಂಡಾನೆಗಳನ್ನು ಹಿಡಿಯಲು ಅವಕಾಶ ನೀಡಿದ್ದು ಮತ್ತೊಂದು ಪುಂಡಾನೆಯನ್ನು ಹಿಡಿಯಲು ನಾಳೆಯಿಂದ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯಿದೆ.
ಒಟ್ಟಾರೆ ಹೆಚ್ಚಿನ ಸಮಯ ವಿನಿಯೋಗಿಸದೆ ಪುಂಡಾನೆಯನ್ನು ಬೇಗನೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹಿಡಿದ ಕಾಡಾನೆಯನ್ನು ರೇಡಿಯೋ ಕಾಲರ್ ಹಾಕಿ ಪುನಃ ಕಾಡಿಗೆ ಬಿಡುವುದೋ ಅಥವಾ ಕಾಡಾನೆ ಸ್ಥಳಾಂತರ ಮಾಡುವುದೋ ಎಂಬುದರ ಕುರಿತು ಇನ್ನು ತೀರ್ಮಾನ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಪರೀಕ್ಷೆ ಕುರಿತು ಮಕ್ಕಳು-ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ: ಸಚಿವ ಸುರೇಶ್ ಕುಮಾರ್