ಹಾಸನ: ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಕಡೆಗರ್ಜೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಚಿಕ್ಕಯ್ಯ (65) ಮತ್ತು ಈರಯ್ಯ (68) ಕಾಡಾನೆ ದಾಳಿಗೆ ಬಲಿಯಾದ ಕಾಫಿ ತೋಟದ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಬೆಳ್ಳಂಬೆಳಗ್ಗೆ ತೋಟದಲ್ಲಿ ಕೆಲಸ ಮಾಡುವ ವೇಳೆ ಒಂಟಿ ಸಲಗ ದಾಳಿ ಮಾಡಿ ಇಬ್ಬರನ್ನು ಬಲಿ ಪಡೆದಿದೆ. ಈ ಘಟನೆಯಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗುಲಸಿಂದ ಗ್ರಾಮದ ಕೆರೆಯಲ್ಲಿ ಕಾಡಾನೆಯೊಂದು ವಾಯುವಿಹಾರ ಮಾಡಿ ಮನರಂಜನೆ ನೀಡಿದ್ರೆ, ಇತ್ತ ಬೇಲೂರು ತಾಲೂಕಿನಲ್ಲಿ ಇಬ್ಬರನ್ನು ಒಂಟಿ ಸಲಗ ಬಲಿ ಪಡೆದಿದೆ.
ಓದಿ: ಗೋವಾದಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಮೋದ್ ಸಾವಂತ್ ಆಯ್ಕೆ ಬಹುತೇಕ ಖಚಿತ
ಕಳೆದ ವಾರದಿಂದ ಈ ಭಾಗದಲ್ಲಿ ಆನೆಗಳು ಸಂಚಾರ ಹೆಚ್ಚಾಗಿದ್ದು, ಆತಂಕ ಸೃಷ್ಟಿಮಾಡಿದೆ. ಆದರೆ, ಇಂದು ಇಬ್ಬರನ್ನು ಬಲಿ ಪಡೆಯುವ ಮೂಲಕ ಕೂಲಿ ಕಾರ್ಮಿಕರು ಕಾಫಿ ತೋಟದ ಕೆಲಸಕ್ಕೆ ಹೋಗದಂತೆ ಭಯಗೊಳಿಸಿವೆ.
ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಕಾರ್ಮಿಕರಿಗೆ ಪರಿಹಾರದ ಜೊತೆಗೆ ಕಾಡಾನೆಯನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.