ಹಾಸನ: ಮಲೆನಾಡಲ್ಲಿ ಮತ್ತೆ ಆನೆಗಳ ಹಾವಳಿ ಹೆಚ್ಚಾಗಿದೆ ಶನಿವಾರ ಕೂಡ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಸುತ್ತ ಮುತ್ತ ಆನೆ ಹಿಂಡು ಕಂಡು ಮಲ್ನಾಡಿನ ಜನ ಬೆಚ್ಚಿಬಿದ್ದಿದ್ದಾರೆ.
ಕಳೆದ ಹದಿನೈದು ದಿನಗಳ ಹಿಂದೆ ಕರಡಿ ಬೆಟ್ಟ ಸಮೀಪದ ಹೆತ್ತೂರು, ಹೊಂಗಡಹಳ್ಳ, ಹುಚ್ಚಂಗಿ, ಮಾಗಲು, ನವಿಲಹಳ್ಳಿ ಭಾಗದಲ್ಲಿ ಕಾಣಿಸಿಕೊಂಡ ಆನೆಗಳು ಈಗ ಬಾಳ್ಳುಪೇಟೆ ಸಮೀಪದ ಅಬ್ಬನ, ಬೆಕ್ಕಡಿ, ಮಗ್ಗೆ ಭಾಗದಿಂದ ಹಿಂಡುಹಿಂಡಾಗಿ ಅಬ್ಬನಾ ಗ್ರಾಮದತ್ತ ಬಂದಿದ್ದು, ಈ ಭಾಗದ ಜನರ ಆತಂಕವನ್ನು ಹೆಚ್ಚಿಸಿದೆ. ಕಳೆದ ಎರಡು ತಿಂಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಕಾಡಂಚಿನ ಆನೆಗಳು ಸೇತುವೆ ದಾಟಲು ಸಾಧ್ಯವಾಗದೆ ನಾಡಿನತ್ತ ಬಂದಿರಲಿಲ್ಲ. ಆದರೆ ಕಾಫಿ ತೋಟಗಳ ರುಚಿಯನ್ನ ಕಂಡಿರುವ ಆನೆಗಳು ಮತ್ತೆ ಕಾಫಿ ತೋಟದ ಕಡೆ ಬರುತ್ತಿರುವುದು ಮಲೆನಾಡ ರೈತರ ನಿದ್ದೆಗೆಡಿಸಿದೆ.
ಆನೆಗಳ ಹಾವಳಿ ಅರಿತು ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ರೈಲ್ವೆ ಕಂಬಿಗಳನ್ನು ಹಾಕುವ ಯೋಜನೆಯನ್ನು ಬಜೆಟ್ನಲ್ಲಿ ಮಂಡಿಸಿದರು. ಇತ್ತೀಚೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾದ ನಂತರ ನಡೆದ ಸಂಪುಟ ಸಭೆಯಲ್ಲಿ ಆನೆ ಹಾವಳಿ ತಡೆಗೆ ತಡೆಗೋಡೆ ನಿರ್ಮಿಸಲು 100 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ಸಿಕ್ಕಿದೆ. ನಾಗರಹೊಳೆ-ಬಂಡಿಪುರ- ಮಲೆಮಹದೇಶ್ವರ ಬೆಟ್ಟ-ಮಡಿಕೇರಿ-ಹಾಸನ-ರಾಮನಗರ ಬನ್ನೇರುಘಟ್ಟ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಕೂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಒಟ್ಟಿನಲ್ಲಿ ಸರ್ಕಾರ ಬದಲಾವಣೆ ಆದಂತೆ ಮಲ್ನಾಡು ಭಾಗದಲ್ಲಿ ಪ್ರಾಣಿ ಸಂಘರ್ಷವನ್ನು ತಡೆಯುವ ಉದ್ದೇಶದಿಂದ ಹೊಸ ಹೊಸ ಯೋಜನೆ ರೂಪಿಸಲಾಗುತ್ತದೆ. ಆದರೆ ಆ ಯೋಜನೆಗಳು ಕೇವಲ ಭರವಸೆಯಾಗಿಯೇ ಉಳಿದಿದೆ.