ಹಾಸನ: ಇತ್ತೀಚಿನ ದಿನದಲ್ಲಿ ಆಲೂರು-ಸಕಲೇಶಪುರ ಭಾಗದಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ಕೂಡಾ 4 ಕಡೆ ಕಾಡಾನೆಗಳು ಕಾಣಿಸಿಕೊಂಡು ಈ ಭಾಗದ ಜನರಿಗೆ ನಡುಕ ಹುಟ್ಟಿಸಿವೆ.
ಆಲೂರು ಸುತ್ತಮುತ್ತಲಿನ ಗ್ರಾಮಗಳಾದ ಮಾದೇಹಳ್ಳಿ, ಅಡಿಬೈಲು, ಮಣಿಪುರ, ನಾಗವಾರ, ದೊಡ್ಡಬೆಟ್ಟ, ಚಿಕ್ಕಬೆಟ್ಟ, ಮಗ್ಗೆ, ರಾಯರಕೊಪ್ಪಲು, ಚಿನ್ನಹಳ್ಳಿ, ಹೊಸಗದ್ದೆ, ನವಿಲಹಳ್ಳಿ, ಮುತ್ತಿಗೆ ಹೀಗೆ ನಾನಾ ಭಾಗದಲ್ಲಿ ಕೆಲ ದಿನಗಳ ಹಿಂದೆ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಗಳನ್ನ ಆನೆಗಳು ನಾಶಮಾಡಿವೆ. ಸಕಲೇಶಪುರದ ಕೌಡಳ್ಳಿ, ಹೆತ್ತೂರು, ಹರಗರವಳ್ಳಿ, ಪಾಲಹಳ್ಳಿ, ಕೊರೊಡಿ, ಅಬ್ಬನಾ ಹೀಗೆ ನಾನಾ ಭಾಗದಲ್ಲಿ ಲಕ್ಷಾಂತರ ರೂಪಾಯಿಗಳ ಬೆಳೆ ಹಾನಿಮಾಡಿವೆ.
ಕಳೆದ 4 ವರ್ಷಗಳ ಹಿಂದೆ ಹೈಕೋರ್ಟ್ ಆದೇಶದಂತೆ ಸುಮಾರು 25 ಆನೆಗಳನ್ನ ಹಿಡಿದು ಮಡಿಕೇರಿ, ಚಾಮರಾಜನಗರ, ಮತ್ತು ಶಿವಮೊಗ್ಗ ಆನೆ ಶಿಬಿರಗಳಿಗೆ ಕಳುಹಿಸಲಾಗಿತ್ತು. ಆದ್ರೆ, ಮತ್ತೇ ಆನೆಗಳ ಸಂತತಿ ಹೆಚ್ಚಾಗಿದೆ. ನಿನ್ನೆ ಸುಮಾರು 100ಕ್ಕೂ ಅಧಿಕ ಆನೆಗಳು ಕಾಡಿನಿಂದ ನಾಡಿಗೆ ಬಂದು ಓಡಾಟ ನಡೆಸುತ್ತಿವೆ.
ಭರವಸೆಯಾಗಿಯೇ ಉಳಿದ ಸಿಎಂ ಮಾತು
ಕಳೆದ 3-4 ತಿಂಗಳ ಹಿಂದೆ ಮತ್ತೆ ಆನೆಗಳನ್ನ ಹಿಡಿದು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕಾಫಿ ಬೆಳೆಗಾರರೊಂದಿಗೆ ಮಲೆನಾಡು ಭಾಗದ ರೈತಾಪಿ ವರ್ಗದ ಜೊತೆಗೂಡಿ ಬಾಳ್ಳುಪೇಟೆಯಲ್ಲಿ ನಿರಂತರ ಪ್ರತಿಭಟನೆ ಮಾಡಿದ್ರು. ಅಂದು ಸಿಎಂ ಕುಮಾರಸ್ವಾಮಿ ತಮ್ಮ ಬಜೆಟ್ನಲ್ಲಿ ಆನೆ ವಿಚಾರ ಪ್ರಸ್ತಾಪಿಸಿ ಕೇರಳ ಮಾದರಿಯಲ್ಲಿ ತಂತಿಬೇಲಿಯಾಕುವ ಭರವಸೆಯನ್ನ ನೀಡಿದ್ದರಿಂದ ಪ್ರತಿಭಟನೆಯನ್ನ ವಾಪಸ್ ಪಡೆದಿದ್ರು.
ಇದಾದ ಬಳಿಕ ಸಿಎಂ ನೀಡಿದ್ದ ಮಾತು ಭರವಸೆಯಾಗಿಯೇ ಉಳಿದಿದ್ದು, ಮತ್ತೆ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಮನೆಯಿಂದ ಹೊರಬಂದು ಕೃಷಿಚಟುವಟಿಕೆಯಲ್ಲಿ ತೊಡಗುವುದಕ್ಕೂ ಭಯಪಡುವಂತಾಗಿದೆ.