ಹಾಸನ: ಆಹಾರ ಅರಸಿ ಬಂದ ಆನೆಯೊಂದು ಮನೆಯ ಬಾಗಿಲು ಮುರಿದು ಮನೆಯೊಳಗಿದ್ದ ದವಸ- ಧಾನ್ಯಗಳನ್ನ ತಿಂದು ಘಟನೆ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆಯಷ್ಷೇ ಯಸಳೂರಿನ ಚಂಗಡಿಹಳ್ಳಿ ಭಾಗದಲ್ಲಿ ಹೆಣ್ಣಾನೆಯೊಂದು ಹೇಮಾವತಿ ಹಿನ್ನೀರಿನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಅದೇ ಆನೆ ಆಲೂರು ತಾಲ್ಲೂಕಿನ ಹಂಜಳಗಿ ಮತ್ತು ಪುರಭೈರವನಹಳ್ಳಿಯ ಗಿರಿಜಾ ಎಂಬುವವರ ಮನೆಗೆ ನುಗ್ಗಿ ಮನೆಯಲ್ಲಿದ್ದ ದವಸ- ಧಾನ್ಯಗಳನ್ನ ತಿಂದಿದೆ.
ಪದೇ ಪದೇ ಕಾಡಾನೆ ಹಾವಳಿಯಿಂದ ಆಕ್ರೋಶಗೊಂಡ ರೈತರು, ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ತಮ್ಮ ದೈನಂದಿನ ತೋಟದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಆನೆಗಳ ಹಾವಳಿ ತಡೆಯಲು ಮುಂದಾಗಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಮಾಡಿದರು.
ತಾಲೂಕಿನ ಕೆ. ಹೊಸಕೋಟೆ ಹೋಬಳಿ ಅಂಜಳಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತು ಪ್ರತಿಭಟನಾ ಕಾರರು, ಕಾಡಾನೆ ಹಾವಳಿಯನ್ನ ತಡೆಗಟ್ಟಿ ನಿರ್ಭೀತಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡುವಂತೆ ಕೋರಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಮುಖಂಡ ನಂದಕುಮಾರ್, ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದರೂ ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ರೈತರು ಇಲಾಖೆಯ ವಾಹನಕ್ಕೆ ಮುತ್ತಿಗೆ ಹಾಕಿ, ಅಧಿಕಾರಿಗಳು ಶಾಸಕರ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಂಡು ನಮಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.