ಹಾಸನ: ರಾಜ್ಯದಲ್ಲಿ ಮಾರ್ಚ್ 4 ರಿಂದ ಪಿ.ಯು.ಸಿ. ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಯಶಸ್ವಿಯಾಗಿ ಪರೀಕ್ಷೆ ನಡೆಯಲು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವರು, ರಾಜ್ಯದಲ್ಲಿ ಒಟ್ಟಾರೆ 1,016 ಪರೀಕ್ಷಾ ಕೇಂದ್ರಗಳಿದ್ದು, 6,80,498 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ನಡೆಸಲು ಅಗತ್ಯ ಪೂರ್ವ ಸಿದ್ಧತೆ ಕುರಿತು ಫೆ.23 ಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಶ್ನೆ ಪತ್ರಿಕೆಗಳನ್ನು ಎಲ್ಲಾ ಜಿಲ್ಲೆಗಳ ಖಜಾನೆ ಹಾಗೂ ತಾಲೂಕು ಉಪ ಖಜಾನೆಯಲ್ಲಿ ಸುರಕ್ಷಿತವಾಗಿರಿಸಲು 24 ಗಂಟೆಯು ಕಣ್ಗಾವಲಿಗೆ ಸಿ.ಸಿ.ಟಿ.ವಿ ಅಳವಡಿಕೆ ಮಾಡುವಂತೆ ತಿಳಿಸಿದರು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಬೇಕು, ಅಕ್ಕ-ಪಕ್ಕದ ಜೆರಾಕ್ಸ್ ಅಂಗಡಿಗಳು, ಟ್ಯೂಷನ್ ಸೆಂಟರ್, ಹಾಗೂ ಸೈಬರ್ ಕೇಂದ್ರಗಳ ಮೇಲೆ ನಿಗಾವಹಿಸಬೇಕು. ಪ್ರಶ್ನೆ ಪತ್ರಿಕೆ ಬರುವುದು ಮತ್ತು ಬಿಡುಗಡೆ ಮಾಡುವುದು ಸಿಸಿ ಟಿವಿಯಲ್ಲಿ ಚಿತ್ರೀಕರಣವಾಗಬೇಕು ಹಾಗೂ ಅಪರ ಜಿಲ್ಲಾಧಿಕಾರಿಗಳು ಪ್ರಶ್ನೆ ಪತ್ರಿಕೆಗಳ ಖಜಾನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು, ಖಜಾನಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಸಚಿವರು ನಿರ್ದೇಶಿಸಿದರು.
ಪಿ.ಯು.ಸಿ ಪರೀಕ್ಷೆಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಖಜಾನೆಗೆ 24 ಗಂಟೆಯೂ ಪೊಲೀಸ್ ಭದ್ರತೆ ನೀಡಬೇಕು. ಹಾಗೂ ಜಿಲ್ಲಾ ಪ್ರಶ್ನೆ ಪತ್ರಿಕೆ ಪಾಲಕರ ಸಮಿತಿಯೊಂದಿಗೆ ಖಜಾನೆಯಲ್ಲಿ ಪತ್ರಿಕೆ ವಿತರಣೆ ಮಾಡಲು ಅಪರ ಜಿಲ್ಲಾಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಖಜಾನೆ ಅಧಿಕಾರಿಗಳ ತಂಡ ಮೂವರು ಸೇರಿ ವಿಶೇಷ ಕ್ರಮ ವಹಿಸಬೇಕು. ಯಾವುದೇ ವ್ಯಕ್ತಿ ಅಥವಾ ಪತ್ರಿಕಾ ಮಾಧ್ಯಮದವರು ಕೊಠಡಿಗೆ ಬಾರದಂತೆ ಕ್ರಮ ವಹಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ವದಂತಿ ಸೃಷ್ಟಿಸುವವರು ಪೊಲೀಸರ ಕಣ್ಗಾವಲಿಗೆ ಸಿಕ್ಕಿ ಬಿದ್ದರೆ ಕಾನೂನು ಕ್ರಮ ಜರುಗಿಸಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಸೋರಿಕೆಯ ಆತಂಕವಿದೆ, ಅದನ್ನು ನಿವಾರಿಸಿ ಅವರ ಹಿತ ಕಾಪಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ತಂಡವಾಗಿ ಕಾರ್ಯ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಮತ್ತು ಸ್ಮಾರ್ಟ್ ವಾಚ್‍ಗಳನ್ನು ತರದಂತೆ ನಿಷೇಧಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಪಿ.ಯು.ಸಿ ಪರೀಕ್ಷೆ ಮುಗಿದ ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆಯು ಪ್ರಾರಂಭವಾಗಲಿದ್ದು, ಪರೀಕ್ಷಾ ಕೇಂದ್ರದ ಮಾರ್ಗಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳ ಗುರುತಿನ ಚೀಟಿಯನ್ನು ನೋಡಿ ಸಾರಿಗೆ ಬಸ್‍ಗಳಲ್ಲಿ ಉಚಿತವಾಗಿ ಕರೆದೊಯ್ಯಬೇಕು. ಅದರಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.