ಹಾಸನ: ಇತಿಹಾಸ ಪ್ರಸಿದ್ಧ ಹಳೇಬೀಡಿನ ದ್ವಾರಸಮುದ್ರ ಕೆರೆ ಏರಿ ಹಾನಿಗೀಡಾಗಿದ್ದು, ನೀರು ಕಡಿಮೆಯಾದ ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 135 ಮೀಟರ್ ಕೆರೆ ಏರಿ ಹಾಳಾಗಿದ್ದು ನೀರು ಭರ್ತಿಯಾಗಿರುವುದರಿಂದ ಕಾಮಗಾರಿ ಕೈಗೊಳ್ಳುವಂತಿಲ್ಲ. ನೀರು ಹೊರ ಬಿಟ್ಟು ಕೆಲಸ ಕೈಗೊಳ್ಳಲು ಸ್ಥಳೀಯರು ಬಿಡುತ್ತಿಲ್ಲ. ನೀರಾವರಿ ಇಲಾಖೆ ಎಂಜಿನಿಯರ್ಗಳು ಪರಿಸ್ಥಿತಿಯನ್ನು ಅರಿತಿದ್ದು, ಏನು ಮಾಡಬೇಕೆಂಬುದರ ಬಗ್ಗೆ ನಿರ್ಧರಿಸುತ್ತಾರೆ. ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಅಟಲ್ ಭೂ ಜಲ ಯೋಜನೆಗೆ ಜಿಲ್ಲೆಯ ಅರಸೀಕೆರೆ ತಾಲೂಕು ಆಯ್ಕೆಯಾಗಿದ್ದು, ಕೈಗೊಳ್ಳಬೇಕಿರುವ ಕಾಮಗಾರಿ ಕುರಿತು ತಯಾರಿ ನಡೆದಿದೆ ಎಂದು ಇದೇ ವೇಳೆ ತಿಳಿಸಿದರು.
ಅಂತರ್ಜಲ ವೃದ್ಧಿಗಾಗಿ ರೂಪಿತವಾಗಿರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಕರ್ನಾಟಕ ಸರ್ಕಾರ ವಿಶೇಷ ಆಸಕ್ತಿ ವಹಿಸಿದ್ದರಿಂದ ಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ನಮಗೆ ಬಿಟ್ಟುಕೊಟ್ಟಿದೆ. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗದರ್ಶನ ಇನ್ನೂ ಬಂದಿಲ್ಲವಾದ್ದರಿಂದ ನಾವೇ ಮುತುವರ್ಜಿ ವಹಿಸಿ ಮಾಡಬೇಕಿರುವ ಕೆಲಸದ ಕುರಿತು ಚಿಂತನೆ ನಡೆಸಿದ್ದೇವೆ ಎಂದರು.
ತುಮಕೂರು, ಹಾಸನ, ಚಿಕ್ಕಮಗಳೂರು ಹಾಗೂ ಅಂತರ್ಜಲ ಕಡಿಮೆ ಇರುವ ಕೆಲ ಜಿಲ್ಲೆಗಳನ್ನು ಯೋಜನೆಯಡಿ ಆಯ್ಕೆ ಮಾಡಿಕೊಂಡಿದ್ದು, 80 ಕೋಟಿ ರೂ. ಅನುದಾನ ಬರಬೇಕಿದೆ. ಅಟಲ್ ಭೂ ಜಲ ಯೋಜನೆಗೆ ವಿಶ್ವ ಬ್ಯಾಂಕ್ ನೆರವು ನೀಡಲಿದೆ ಎಂದರು.