ಸಕಲೇಶಪುರ : ತಾಲೂಕಿನ ಎಲ್ಲಾ ಜಾತಿಯವರ ಮತ್ತು ಬಡವರ ಜಮೀನುಗಳ ಪಹಣಿ ಮತ್ತು ಪಕ್ಕಾ ಪೋಡ್ನ ಕೂಡಲೇ ಮಾಡಿಕೊಡಬೇಕು ಹಾಗೂ ಬಗರ್ ಹುಕುಂ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನಾ ಸಂಚಾಲಕ ವಳಲಹಳ್ಳಿ ವೀರೇಶ್, ಇತ್ತೀಚಿನ ದಿನಗಳಲ್ಲಿ ಫಾರಂ ನಂ.53 ನಮೂನೆಯ ದರಖಾಸ್ತು ಜಮೀನಿನ ದುರಸ್ಥಿ ಮತ್ತು ಹದ್ದುಬಸ್ತು ವಿಚಾರಕ್ಕೆ ಬಡವರ ಅರ್ಜಿಗಳನ್ನು ವಿಲೇವಾರಿ ಮಾಡದೆ ತಡ ಮಾಡಲಾಗುತ್ತಿದೆ. ಬಡವರನ್ನು ಸತಾಯಿಸಲಾಗುತ್ತಿದೆ. ಕೇವಲ ಉಳ್ಳವರಿಗೆ ಹಾಗೂ ಹೆಚ್ಆರ್ಪಿ ಸಂತ್ರಸ್ತರಿಗೆ ಮಾತ್ರ ಜಮೀನು ಪಕ್ಕಾ ಪೋಡ್ ಹಾಗೂ ದುರಸ್ಥಿ ಮಾಡಿಕೊಡಲಾಗುತ್ತಿದೆ ಎಂದು ದೂರಿದರು.
ಬಡವರ ಜಮೀನುಗಳ ಹದ್ದುಬಸ್ತ್ ಹಾಗೂ ಪಕ್ಕಾ ಪೋಡು ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆಲ ಗೋಮಾಳಗಳಲ್ಲಿ 10 ರಿಂದ 20 ಕುಟುಂಬ ಒಕ್ಕಲುತನ ಮಾಡಿಕೊಂಡು ಬಂದಿವೆ. ಆದರೆ, ದೂರದಲ್ಲಿ ಕುಳಿತಿರುವ ಅಧಿಕಾರಿಗಳು ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಹೆಚ್ಆರ್ಪಿಯಲ್ಲಿ ಜಾಗವನ್ನು ಪ್ರಭಾವಿಗಳಿಗೆ ಮಂಜೂರು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಈ ಸಂಧರ್ಭದಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷ ತಮ್ಮಯ್ಯ, ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ್ ಹಾನುಬಾಳ್ ಸೇರಿದಂತೆ ಇತರರು ಹಾಜರಿದ್ದರು.