ಹಾಸನ: ದಲಿತ ಯುವಕ ದೇವಸ್ಥಾನದಲ್ಲಿ ಸಮನಾಗಿ ಕುಳಿತ ಎಂಬ ಕಾರಣಕ್ಕೆ ಕೊಲೆಗೈದ ಅರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದ್ರಾವಿಡ ಭೀಮಾ ಆರ್ಮಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಗಳ ಗ್ರಾಮದಲ್ಲಿ ದಲಿತ ಯುವಕ ಅನಿಲ್ನನ್ನು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸರಿಸಮನಾಗಿ ಕುಳಿತಿದ್ದಾನೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ತಕ್ಷಣವೇ ಅಪರಾಧಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಕೊಲೆಗೀಡಾದ ಅನೀಲ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು. ಆ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಸಿದರು.
ದಲಿತರ ಮೇಲಿನ ಇಂತಹ ದೌರ್ಜನ್ಯ, ಅಪರಾಧಗಳನ್ನು ತಡೆಯಲು ಮತ್ತು ಕಠಿಣ ಕ್ರಮ ವಹಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.