ಹಾಸನ: ವರದಕ್ಷಿಣೆ ಕಿರುಕುಳದಿಂದ ಗರ್ಭಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಮೃತ ಗರ್ಭಿಣಿಯನ್ನು ರೋಹಿಣಿ (23) ಎಂದು ಗುರುತಿಸಲಾಗಿದೆ. ಮಗಳ ಸಾವಿಗೆ ಪತಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಪಶುಪತಿ ಗ್ರಾಮದ ರೋಹಿಣಿಯನ್ನು ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ 2 ತಿಂಗಳ ನಂತರ ಅತ್ತೆ ಮೀನಾಕ್ಷಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಿದ್ದಾರೆ. ಇದಲ್ಲದೇ ಮದುವೆಯ ಸಮಯದಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವುದಾಗಿ ಸುಮಂತ್ ಸುಳ್ಳು ಹೇಳಿದ್ದು, ರೋಹಿಣಿಗೆ ತಿಳಿದು ಗಂಡ ಹೆಂಡತಿಯ ಮತ್ತೆ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ.
ಕೊಲೆ ಅನುಮಾನಕ್ಕೆ ಕಾರಣ: ವಿಚಾರದ ಬಗ್ಗೆ ಆಕೆ ತನ್ನ ಸಹೋದರನಿಗೆ ಸಂದೇಶ ಕಳುಹಿಸಿ ಪತಿ ಸುಮಂತ್ ಕಿರುಕುಳದ ಬಗ್ಗೆ ತಿಳಿಸಿದ್ದಳಂತೆ. ಡಿ.18 ರೋಹಿಣಿ ಮತ್ತು ಸುಮಂತ್ ಖಾಸಗಿ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದು, ಡಿ. 20ರಂದು ಇಬ್ಬರು ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಹೊರಟಿದ್ದರು. ಈ ವೇಳೆ ರೋಹಿಣಿ ತನ್ನ ತಂದೆಗೆ ಎರಡು ಬಾರಿ ಕರೆ ಮಾಡಿ ಚೆನ್ನಾಗಿ ಮಾತನಾಡಿದ್ದಾರೆ. ನಂತರ ಚನ್ನರಾಯಪಟ್ಟಣ ತಾಲೂಕಿನ ಡಿ.ಸಮುದ್ರವಳ್ಳಿ ಬಳಿ ದಂಪತಿ ರೈಲಿನಿಂದ ಇಳಿದಿದ್ದಾರೆ. ಬಳಿಕ ಸ್ವಲ್ಪ ದೂರದಲ್ಲಿದ್ದ ಕೆರೆ ದಡದ ಬಳಿ ನಡೆದುಕೊಂಡು ಹೋಗಿ ಗ್ರಾಮದ ಮಹಿಳೆಯರು ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದುದನ್ನು ಕಂಡ ಸುಮಂತ್ ಪತ್ನಿ ರೋಹಿಣಿಗೆ ಇಲ್ಲೇ ಇರುವಂತೆ ಹೇಳಿ ತಲೆಮರೆಸಿಕೊಂಡಿದ್ದಾನೆ.
ಕೆರೆಯ ಬಳಿ ರೋಹಿಣಿ ಒಬ್ಬಳೇ ನಿಂತಿದ್ದನ್ನು ಅಲ್ಲಿನ ಮಹಿಳೆಯರು ನೋಡಿದ್ದಾರೆ. ಬಳಿಕ ರೋಹಿಣಿ ನಾಪತ್ತೆಯಾಗಿದ್ದಾರೆ. ತಂದೆ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ತೆಗೆದುಕೊಳ್ಳಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಟವರ್ ಲೊಕೇಶನ್ ಮೂಲಕ ರೋಹಿಣಿ ಟ್ರೇಸ್ ಮಾಡಿದ್ದಾರೆ. ಕೆರೆ ತಲುಪಿದಾಗ ದಡದಲ್ಲಿ 1,760 ರೂ. ಹಣ, ಮೊಬೈಲ್ ಫೋನ್ ಮತ್ತು ಶೂ. ಸಿಕ್ಕಿದ್ದು, ಕೆರೆಯಲ್ಲಿ ಶೋಧ ನಡೆಸಿದಾಗ ರೋಹಿಣಿ ಮೃತದೇಹ ಪತ್ತೆಯಾಗಿದೆ.
ಸುಮಂತ್, ಮೀನಾಕ್ಷಿ, ಸುಶ್ಮಿತಾ ಮತ್ತು ಪ್ರಮೋದ್ ವಿರುದ್ಧ ಪಾಲಕರು ದೂರು ದಾಖಲಿಸಿ ತಮ್ಮ ಮಗಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆ ಕುರಿತು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಂಟ್ವಾಳ: ಒಂಟಿ ಮಹಿಳೆ ಕಟ್ಟಿಹಾಕಿ ದರೋಡೆ