ಹಾಸನ: ನೀವು ಕಟ್ಟುವ ಹಣವನ್ನು ನಾಲ್ಕೇ ವರ್ಷಗಳಲ್ಲಿ ಡಬಲ್ ಮಾಡ್ತೀವಿ ಅಂತ ಹೇಳಿ ಕೋಟ್ಯಂತರ ರೂಪಾಯಿ ಕಟ್ಟಿಸಿಕೊಂಡು ಗ್ರಾಹಕರಿಗೆ ಮೋಸ ಮಾಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ತಾನು ಕಟ್ಟಿದ್ದ ಹಣವನ್ನು ಕೇಳಲು ಮನೆಗೆ ಬಂದ ಮಹಿಳೆಯ ಮೇಲೆ ಪಕ್ಷವೊಂದರ ಮುಖಂಡನೊಬ್ಬ ತನ್ನ ಕಾರು ಹತ್ತಿಸಲು ಮುಂದಾಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಮಹಿಳೆಯ ಮೇಲೆ ಕಾರು ಹತ್ತಿಸುತ್ತಿರುವ ವ್ಯಕ್ತಿ ರಾಜಕೀಯ ಪಕ್ಷವೊಂದರ ಮುಖಂಡ ಎನ್ನಲಾಗಿದೆ. ಸದ್ಯ ಪಕ್ಷವೊಂದರ ಮುಖಂಡನಾಗಿರುವ ಆತ, ಕಳೆದ ಕೆಲ ವರ್ಷಗಳ ಹಿಂದೆ ಎಸ್.ಎಲ್.ಎಸ್ ಎಂಬ ಕಂಪನಿಯೊಂದನ್ನು ಮೈಸೂರಿನಲ್ಲಿ ಪ್ರಾರಂಭಿಸಿದ್ದರು. ಆರ್.ಡಿ.ರೂಪದಲ್ಲಿ ಹಣವನ್ನ ಕಟ್ಟಿಸಿಕೊಂಡು 4 ವರ್ಷಗಳಲ್ಲಿ ಡಬಲ್ ಮಾಡಿಕೊಡುವುದಾಗಿ ನಂಬಿಸಿದ್ದನು. ಸಾವಿರಾರು ಮಂದಿಗೆ ಪಂಗನಾಮ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಯೋಗೀಶ್ ಎಂಬುವವರ ಮೇಲೆ ಕೇಳಿ ಬಂದಿದೆ.
ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಗುಡ್ಡಗಾಡು ಪ್ರದೇಶದ ಬಡಪಾಯಿಗಳು ಕೂಲಿ ಮಾಡಿ ಒಂದಿಷ್ಟು ಹಣವನ್ನು ಕೂಡಿಟ್ಟಿದ್ದರು. ಆದ್ರೆ ಯಾರದ್ದೋ ಮಾತು ಕೇಳಿ ಇಂತಹದೊಂದು ನಕಲಿ ಕಂಪನಿಗೆ ಕಟ್ಟಿ ತಿನ್ನುವುದಕ್ಕೂ ಪರದಾಡುವ ಪರಿಸ್ಥಿತಿಯನ್ನ ತಂದುಕೊಂಡಿದ್ದಾರೆ. ವಾಪಸ್ ಹಣವನ್ನು ಕೇಳಿದ್ರೇ, ಲೇಔಟ್ ಮಾರಿದ ಬಳಿಕ ಹಣ ಕೊಡುವುದಾಗಿ ಹೇಳುತ್ತಿದ್ದಾರಂತೆ.