ಹಾಸನ : ಕೊರೊನಾ ಪಾಸಿಟಿವ್ ಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ರೂ, ಕೆಲ ಸಾಮಾಜಿಕ ಜಾಲತಾಣದಲ್ಲಿ ಯಾವುದೋ ವಿಡಿಯೋ ಪ್ರದರ್ಶಿಸಿ ಸುಳ್ಳು ಸುದ್ದಿ ನೀಡಲಾಗುತ್ತಿದೆ. ಹಾಸನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಏನಾದ್ರೂ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತರುವ ಮೂಲಕ ಸರಿಪಡಿಸಿಕೊಳ್ಳುವಂತೆ ಹಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವಿಡಿಯೋ ಹರಿದಾಡುತ್ತಿದೆ. ವಾಂತಿ ಮಾಡುತ್ತಿರುವುದು ತೋರಿಸಿದ್ದು, ಅದು ನಮ್ಮ ಆಸ್ಪತ್ರೆಗೆ ಸಂಬಂಧಿಸಿದ್ದಲ್ಲ. ಇದೆಲ್ಲಾ ಹಾಸನದ ಸರ್ಕಾರಿ ಆಸ್ಪತ್ರೆಯ ಕೊರೊನಾ ರೋಗಿಗಳ ಪರಿಸ್ಥಿತಿ ಎಂದು ಹೇಳಲಾಗಿರುವುದು ಶುದ್ಧ ಸುಳ್ಳು ಸುದ್ದಿ. ಈ ಬಗ್ಗೆ ಅಪರಾದ ಠಾಣೆಗೆ ದೂರನ್ನು ಸಲ್ಲಿಸಲಾಗುವುದು ಎಂದರು.
ಹತ್ತು ದಿನದ ಹಳೆಯ ವಿಡಿಯೋ ಇದಾಗಿದೆ. ವ್ಯಕ್ತಿಗೆ ವರದಿ ನೆಗೆಟಿವ್ ಬಂದ ಕೂಡಲೇ ಅವರನ್ನ ಕಳುಹಿಸಬೇಕಾಗಿತ್ತು. ವಿಡಿಯೋದಲ್ಲಿ ದೂರಿರುವಂತೆ 36 ದಿನ ಯಾವ ರೋಗಿಯೂ ಕೂಡ ಇಲ್ಲಿ ಇರುವುದಿಲ್ಲ. ಹೆಚ್ಚು ಅಂದ್ರೇ 24 ದಿನಕ್ಕೆ ಸ್ವ್ಯಾಬ್ ಪಾಸಿಟಿವ್ ಬರುತ್ತಿದ್ದ ಪ್ರಕರಣ ಇದ್ದವು. ಹಾಗಾಗಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದಗ 7 ದಿವಸಕ್ಕೆ ನೆಗೆಟಿವ್ ಬರುತ್ತಿದೆ. ಇನ್ನು, ಕೆಲವರಿಗೆ 20 ದಿನ ಕಳೆದ್ರೂ ಗುಣವಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಇಲ್ಲಿರುವ ರೋಗಿಗಳಿಗೆ ಡೆಟಾಲ್, ಬಿಸಿನೀರು, ನೀರಿನ ಬಾಟಲಿಗಳನ್ನೇ ಕೊಡುತ್ತಿದ್ದೇವೆ. ಪಿಪಿಇ ಕಿಟ್ ಧರಿಸಿ ಸ್ವಚ್ಛತೆ ಮಾಡಲಾಗುತ್ತಿದೆ. ಪ್ರತಿ ವಿಭಾಗದಲ್ಲೂ ನಾಲ್ಕರಿಂದ ಐದು ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಇದನ್ನು ಮಾನಿಟರ್ ಮಾಡಲು ವಿಶೇಷ ಘಟಕ ರಚಿಸಲಾಗಿದೆ. ಇಷ್ಟೆಲ್ಲಾ ವ್ಯವಸ್ಥೆ ಮಾಡಿದ್ರೂ ಅವ್ಯವಸ್ಥೆ ಇದೆ ಎಂದು ಬಿಂಬಿಸುತ್ತಿರುವುದು ನಮಗೆಲ್ಲಾ ಮನಸ್ಸಿಗೆ ನೋವನ್ನುಂಟು ಮಾಡಿದೆ ಎಂದರು.
ಜನಪ್ರತಿನಿಧಿಗಳು ಕೂಡ ಸುಮ್ಮನಿಲ್ಲ. ನಮ್ಮನ್ನು ತುದಿಗಾಲಿನಲ್ಲೇ ನಿಲ್ಲಿಸಿದ್ದಾರೆ. ನಿತ್ಯ ಇಲ್ಲಿನ ಹಾಗು-ಹೋಗುಗಳ ಬಗ್ಗೆ ಜನಪ್ರತಿನಿಧಿಗಳು ವಿಚಾರಿಸುತ್ತಿದ್ದಾರೆ. ನಾವೆಲ್ಲಾ ಉತ್ತಮ ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರ ಸಹಕಾರ ನಮಗೆ ಬೇಕು. ಏನಾದ್ರೂ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತರಬೇಕು. ನಮ್ಮಲ್ಲಿ ಪರಿಹಾರ ಇಲ್ಲ ಎಂದರೆ ಜಿಲ್ಲಾಡಳಿತವಿದೆ. ಸುಖಾಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡುವುದು ಬೇಡ ಎಂದು ಮನವಿ ಮಾಡಿದರು.