ಅರಸೀಕೆರೆ (ಹಾಸನ): ಬಿಜೆಪಿ ಬಿದ್ದು ಹೋಗ್ತಿದೆ. ಪ್ರಧಾನಿ ನರೇಂದ್ರ ಮೋದಿ ಪಕ್ಷವನ್ನು ಮೇಲೆತ್ತಲು ರಾಜ್ಯಕ್ಕೆ ಬಂದಿದ್ದಾರೆ. ಹುಲಿ, ಸಿಂಹ ನೋಡಿಕೊಂಡು ಹೋಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಅರಸೀಕೆರೆ ಪಟ್ಟಣದಲ್ಲಿಂದು ಜೆಡಿಎಸ್ ಮಾಜಿ ಶಾಸಕ ಶಿವಲಿಂಗೇಗೌಡರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ದಿನ ಮೇ.10ನೇ ತಾರೀಕು. ಅಂದು ಭಷ್ಟಚಾರವನ್ನು ಬಡಿದೋಡಿಸುವ ದಿನ. ರಾಜ್ಯದ ಭವಿಷ್ಯಕ್ಕೆ ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣ ಮಾಡುವ ದಿನ ಬಂದಿದೆ ಎಂದರು.
ಬೇರೆ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಮಾತನಾಡಿ, ಕಿರಣ್ ಕುಮಾರ್ ಮತ್ತು ಶಿವಲಿಂಗೇಗೌಡರಿಗೆ ಬುದ್ಧಿ ಇಲ್ಲವೇ? ಇವರೆಲ್ಲ ಶಾಸಕರಾಗಿದವರು. ಇಂತಹ ಯೋಚನೆ ಮಾಡುತ್ತಿದ್ದಾರೆ. ಬಿಜೆಪಿಯ ಸಿಟ್ಟಿಂಗ್ ಎಂಎಲ್ಎ ಮತ್ತು ಎಂಎಲ್‌ಸಿಗಳು ಕಾಂಗ್ರೆಸ್ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಇವರೆಲ್ಲ ಪ್ರಜ್ಞಾವಂತ ನಾಯಕರು. ಇವರು ಜೆಡಿಎಸ್ ಮತ್ತು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ವಿಶ್ವಾಸ ಇರುವ ಪಕ್ಷ ಅಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರು ಬಂಡಾಯವೆದ್ದು ಜೆಡಿಎಸ್ಗೆ ವಲಸೆ ಬರುತ್ತಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ನಾನು ಅವರ ಪಾರ್ಟಿಯಿಂದ ಎಷ್ಟು ಜನ ಬಂದಿದ್ದಾರೆಂದು ಲೆಕ್ಕ ಕೊಡ್ತೀನಿ, ಇನ್ನೂ ಸಮಯ ಇದೆ ಎಂದರು. ವೈ.ಎಸ್.ವಿ ದತ್ತಾ ಸ್ವತಂತ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷಕ್ಕೆ ಯಾರೂ ಕಂಡಿಷನ್ ಹಾಕಿ ಬಂದಿಲ್ಲ, ನಾವು ಟಿಕೆಟ್ ಕೊಡ್ತೀವಿ ಎಂದು ಯಾರನ್ನೂ ಕರೆಸಿಕೊಂಡಿಲ್ಲ. ಆದರೆ ದತ್ತಾರ ಅವರಿಗೆ ಉತ್ತಮ ಸ್ಥಾನಮಾನ ಕೊಡುತ್ತೇವೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕಾದರೆ ಏನು ಮಾತನಾಡಿದ್ರು ಅನ್ನೋದನ್ನ ಮೊದಲು ಗಮನಿಸಿ, ಉಳಿದಿದ್ದನ್ನು ಆಮೇಲೆ ಮಾತಾಡೋಣ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಅವರ ಜೊತೆ ಕೆಲಸ ಮಾಡಲು ಸಿದ್ದ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಹಿರಿಯರು ಮತ್ತು ಎಐಸಿಸಿ ಅಧ್ಯಕ್ಷರು. ನಮ್ಮಂತಹ ಸಾಮಾನ್ಯರು ಅವರಿಗೆ ಬೆಂಬಲವಾಗಿ ನಿಂತುಕೊಳ್ಳಲಿಲ್ಲ ಎಂದರೆ, ಅವರ ನಾಯಕತ್ವಕ್ಕೆ ನಾವು ಬೆಂಬಲಿಸಲಿಲ್ಲ ಎಂದರೆ ನಾವು ಮನುಷ್ಯರೇ? ಹೀಗಾಗಿ ನಮ್ಮ ಅಧಿಕಾರ ಮುಖ್ಯ ಅಲ್ಲ, ಕಾಂಗ್ರೆಸ್ ಅಧಿಕಾರ ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ನಾಗರಾಜ್ ಛಬ್ಬಿ: ದೆಹಲಿಯಲ್ಲಿ ಪಕ್ಷ ಸೇರ್ಪಡೆ